ಅನಿರ್ದಿಷ್ಟಾವಧಿ ಧರಣಿ ಆರಂಭ

12NGD2
Published on

ನಂಜನಗೂಡು: ಕಮಲೇಶ್‌ಚಂದ್ರ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸುವುದು ಹಾಗೂ ಗ್ರಾಮೀಣ ಅಂಚೆ ಸೇವಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣ ಅಂಚೆ ಸೇವಕರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.


ನಗರದ ಪ್ರಧಾನ ಅಂಚೆ ಕಚೇರಿ ಎದುರು ಸೇರಿದ ಅಂಚೆ ಸೇವಕರು ವರದಿಯನ್ನು ಅನುಷ್ಠಾನಗೊಳಿಸಿ ಸೌಲಭ್ಯ ಕಲ್ಪಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಅಂಚೆ ಸೇವಕರ ಸಂಘದ ಅಧ್ಯಕ್ಷ ಬಿ.ಸುಬ್ಬಣ್ಣ ಮಾತನಾಡಿ, ಗ್ರಾಮೀಣ ಅಂಚೆ ಸೇವಕರನ್ನು ಅಂಚೆ ನೌಕರರೆಂದು ಪರಿಗಣಿಸಿ ಅಂಚೆ ನೌಕರರಿಗೆ ನೀಡಲಾಗುವ ಸೌಲಭ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ 2016 ರಿಂದಲೂ ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ ಕೇಂದ್ರ ಸರ್ಕಾರ ಸೌಲಭ್ಯ ಕಲ್ಪಿಸಲು ವಿಫಲವಾಗಿದೆ. ಇದರಿಂದ ಗ್ರಾಮೀಣ ಅಂಚೆ ಪಾಲಕರ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ದೂರಿದರು.


ಗ್ರಾಮೀಣ ಅಂಚೆ ಕಚೇರಿಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ಸೇವಾ ಹಿರಿತನದ ಆಧಾರದ ಮೇಲೆ ಗ್ರಾಮೀಣ ಅಂಚೆ ನೌಕರರಿಗೆ ವಿಶೇಷ ಭತ್ಯೆ ನೀಡಬೇಕು. ಗ್ರಾಚ್ಯುಟಿ ಮೇಲಿನ ಗರಿಷ್ಠ ಮೊತ್ತ 1.5 ಲಕ್ಷಗಳ ಮಿತಿ ತೆಗೆದು ಹಾಕಿ 5 ಲಕ್ಷ ರೂ.ವರೆಗೆ ನೀಡಬೇಕು. ಜಿಡಿಎಸ್ ನೌಕರರಿಗೆ ಮತ್ತು ಕುಟುಂಬದವರಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು. 30 ದಿನಗಳ ವೇತನ ಸಹಿತ ರಜೆ ನೀಡಬೇಕು. 7ನೇ ವೇತನ ಆಯೋಗದ ವರದಿಯಂತೆ 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ನಿವೃತ್ತ ಅಂಚೆ ಪಾಲಕ ಜಿ.ಶಿವಣ್ಣ ಮಾತನಾಡಿ ಜಿಡಿಎಸ್ ನೌಕರರು ನಿವೃತ್ತಿಯಾದ ನಂತರ ಇಳಿವಯಸ್ಸಿನಲ್ಲೂ ಜೀವನೋಪಾಯಕ್ಕಾಗಿ ಕೂಲಿ ಮಾಡುವ ಮೂಲಕ ಜೀವನ ಸಾಗಿಸುವಂತಾಗಿದೆ. ಆದ್ದರಿಂದ ಸರ್ಕಾರ ಜಿಡಿಎಸ್ ನೌಕರರನ್ನು ಕಾಯಂಗೊಳಿಸಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಶೇಖಣ್ಣ, ರೇವಣ್ಣಸಿದ್ದಪ್ಪ, ಚಿಕ್ಕಲಿಂಗಪ್ಪ, ಪ್ರಕಾಶ್, ಚಿನ್ನಸ್ವಾಮಿ, ಮಹೇಶ್, ಮಾದೇಶ್, ಸೌಮ್ಯಾ, ಭೂಮಿಕಾ, ಜ್ಯೋತಿ, ಪಲ್ಲವಿ, ದಾಕ್ಷಾಯಿಣಿ, ರಾಜಮ್ಮ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net