

ಹನೂರು : ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ನ.26 ರಂದು ರೈತ ಸಂಘಟನೆಯ ವತಿಯಿಂದ ಬೈಲೂರು ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ತಾಲೂಕಿನ ಬೈಲೂರು ಗ್ರಾಮದಲ್ಲಿ ಮಂಗಳವಾರ ಹುಣಸೆಪಾಳ್ಯ, ಕೆರೆದೊಡ್ಡಿ, ಅಟ್ಟುಗೌಡನಪಾಳ್ಯ, ಮುನಿಗುಡಿದೊಡ್ಡಿ ಹಾಗೂ ಹೊಸಪಾಳ್ಯದ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಈ ಭಾಗವು ಬಿಆರ್‌ಟಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ವಿಭಾಗವನ್ನು ಹೊಂದಿದೆ. ಆದರೆ ಕಾಡು ಪ್ರಾಣಿಗಳು ಆಗಾಗ್ಗೆ ಜಮೀನುಗಳಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿದೆ. ಇದರಿಂದ ರೈತರು ಕೃಷಿಯಲ್ಲಿ ನಷ್ಟವನ್ನು ಎದುರಿಸುವಂತಾಗಿದೆ. ಇತ್ತ ನಾಶವಾದ ಬೆಳೆಗೆ ಸೂಕ್ತ ಪರಿಹಾರ ನೀಡುತ್ತಿಲ್ಲ. ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಂತೆ ಈ ಭಾಗದ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಜತೆಗೆ ಪ್ರತಿಭಟನೆಯನ್ನು ನಡೆಸಿದ್ದಾರೆ. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಜತೆಗೆ ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಕಷ್ಟದ ನಡುವೆ ಕೃಷಿ ಮಾಡಬೇಕಾದ ಸ್ಥಿತಿ ಇದೆ ಎಂದರು.
ಇನ್ನು ಕಾಡಂಚಿನ ಗ್ರಾಮಗಳಿಗೆ ಹಗಲಿನ ವೇಳೆಯಲ್ಲಿ ಸಮರ್ಪಕ ವಿದ್ಯುತ್ ನೀಡುವಂತೆ ಸರ್ಕಾರ ಆದೇಶಿಸಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಭಾಗದ ರಸ್ತೆ, ಕಿರು ಸೇತುವೆಗಳು ಹಾಳಾಗಿದೆ. ಬಸ್ ಸೌಕರ್ಯ ಸಮರ್ಪಕವಾಗಿಲ್ಲದ ಪರಿಣಾಮ ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳು ತೊಂದರೆ ಪಡುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಈ ದೆಸೆಯಲ್ಲಿ ಗ್ರಾಮ ಘಟಕ ಉದ್ಘಾಟಿಸುತ್ತಿರುವುದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಶ್ನಿಸುವ ಮಣೋಭಾವನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಸಂಘಟಿತರಾಗಬೇಕು. ನ.26 ರಂದು ನಡೆಯುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಭೈರನತ್ತ ರಾಜು, ಅಂಬಳೆ ಶಿವಕುಮಾರ್, ವಿಶ್ವೇಶ್ವರ ಪ್ರಸಾದ್, ನಂದೀಶ್, ಸಿದ್ದಪ್ಪ, ಶಾಂತಕುಮಾರ್, ಸದಾನಂದ, ಶಿವಕುಮಾರ್, ಮಾದಪ್ಪ, ಶಿವಮಾದಪ್ಪ, ಮಹೇಶ್, ಶಂಕರ್, ಪ್ರದೀಪ್ ಇನ್ನಿತರರು ಇದ್ದರು.