

ಮದ್ದೂರು: ಶವ ಹೂಳಲು ಸ್ಮಶಾನದ ಜಾಗದಲ್ಲಿ ಪ್ರಭಾವಿಗಳು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ತಾಲೂಕು ಕಚೇರಿಯ ಮುಂದೆ ಶವವಿಟ್ಟು ಗೆಜ್ಜಲಗೆರೆ ಕಾಲನಿ ನಿವಾಸಿಗಳು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಗ್ರಾಮದ ಸ್ಮಶಾನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಶನಿವಾರ ಸಂಜೆ ಗ್ರಾಮದ ರಾಜು ಎಂಬುವರು ಮೃತಪಟ್ಟ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯನ್ನು ನಡೆಸಲು ಗ್ರಾಮಸ್ಥರು ಹೋದ ಸಂದರ್ಭದಲ್ಲಿ ಅಂತ್ಯಕ್ರಿಯೆ ನಡೆಸಲು ಕೆಲವು ಪ್ರಭಾವಿಗಳು ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಕಳೆದ 15 ದಿನಗಳಲ್ಲಿ 2 ಬಾರಿ ಗ್ರಾಮಸ್ಥರು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಯನ್ನು ನಡೆಸಿದರು.
ರಾತ್ರಿ 9 ಗಂಟೆಗೆ ಶವವನ್ನು ತಾಲೂಕು ಕಚೇರಿಯ ಮುಂದೆ ಇಟ್ಟು ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಸಿಪಿಐ ವೆಂಕಟೇಗೌಡ ಸಿಬ್ಬಂದಿಯೊಂದಿಗೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಮುಂದೆ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.