

ಕೊಪ್ಪಳ: ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಇಂದಿನಿಂದ ಟೋಲ್ ಸಂಗ್ರಹ ಆರಂಭವಾಗಿದ್ದು, ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಟೋಲ್ ಸಂಗ್ರಹಣೆಗೆ ಸ್ಥಳೀಯರು ಹಾಗೂ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ವಿರೋಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶುಲ್ಕ ಸಂಗ್ರಹಣೆಗೆ ಮುಂದಾಗಿದೆ.
ಇದೀಗ ಬೆಂಗಳೂರು-ಮೈಸೂರು ಏಕ್ಸ್ಪ್ರೆಸ್ ಹೈವೆಯಲ್ಲಿ ಪ್ರತಿಭಟನೆ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ನಾನು ಈಗಾಗಲೇ ಸಮಸ್ಯೆ ಬಗೆಹರಿಸುವಂತೆ ಟೋಲ್ನವರಿಗೆ ಸೂಚನೆ ನೀಡಿದ್ದೇನೆ. ಪ್ರತಿ ಬಾರಿ ಟೋಲ್ ಪ್ರಾರಂಭವಾದಾಗ ಈ ಸಮಸ್ಯೆ ಸಹಜ ಎಂದು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಕೆ ಬಳಿ ಕನ್ನಡಪರ ಸಂಘಟನೆಗಳು ಟೋಲ್ ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಟೋಲ್ ಪ್ಲಾಜಾ ಕಂಬಿ ಮುರಿದು ಕನ್ನಡಪರ ಸಂಘಟನೆ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಟೋಲ್ ಕಂಬಿ ಮುರಿದ ಸದಸ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಜಾಗ್ರತೆಯ ದೃಷ್ಟಿಯಿಂದ ಕಣಮಿಣಕೆ ಟೋಲ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 3 ಕೆಎಸ್ಆರ್ಪಿ ತುಕಡಿ, ಸ್ಥಳೀಯ ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.