ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ

toll gate
ಟೋಲ್ ಸಂಗ್ರಹ ವಿರೋಧಿಸಿ ಕಲ್ಲಾಪುರ ಟೋಲ್ ಗೇಟ್‌ಗೆ ಅಡ್ಡಲಾಗಿ ಕೆಲ ಸಮಯ ಖಾಸಗಿ ಬಸ್‌ಗಳನ್ನು ನಿಲುಗಡೆ ಮಾಡಿ ಪ್ರತಿಭಟಿಸಲಾಯಿತು.
Published on

ಶಿವಮೊಗ್ಗ: ಶಿವಮೊಗ್ಗ-ಶಿಕಾರಿಪುರ ರಸ್ತೆಯಲ್ಲಿ ಟೋಲ್ ಸಂಗ್ರಹವನ್ನು ಕೂಡಲೇ ಸರ್ಕಾರ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಖಾಸಗಿ ಬಸ್ ಮಾಲೀಕರು ಸವಳಂಗ ರಸ್ತೆಯ ಕಲ್ಲಾಪುರ ಟೋಲ್‌ನಲ್ಲಿ ಮಂಗಳವಾರ ಪ್ರತಿಭಟಿಸಿದರು. ಕೆಲ ಸಮಯ ಟೋಲ್ ಗೇಟ್‌ಗಳಿಗೆ ಅಡ್ಡಲಾಗಿ ಬಸ್‌ಗಳನ್ನು ನಿಲುಗಡೆ ಮಾಡಿ ಆಕ್ರೋಶ ಹೊರಹಾಕಿದರು.

ಶಿವಮೊಗ್ಗ -ಶಿಕಾರಿಪುರ -ಹಾನಗಲ್ ರಾಜ್ಯ ಹೆದ್ದಾರಿಯ ಕಲ್ಲಾಪುರ ಮತ್ತು ಕುಟ್ರಳ್ಳಿಯಲ್ಲಿ ಟೋಲ್ ಗೇಟ್‌ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಖಾಸಗಿ ಬಸ್ ಮಾಲೀಕರಿಗೆ ಹೊರೆಯಾಗಿದೆ. ಅಂತರ ಜಿಲ್ಲೆ ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಎರಡು ಟೋಲ್‌ಗಳ ಅಕ್ಕಪಕ್ಕ ಹತ್ತಾರು ಹಳ್ಳಿಗಳಿವೆ. ರೈತರು ತೋಟ ಗದ್ದೆಗೆ ತೆರಳಲು ಟೋಲ್ ಪಾವತಿಸಬೇಕಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದುರ.
ಟೋಲ್ ಪಾವತಿಸುವುದಕ್ಕೆ ಪ್ರತಿ ತಿಂಗಳು ಖಾಸಗಿ ಬಸ್ ಮಾಲೀಕರಿಗೆ ಅಂದಾಜು 25 ಸಾವಿರ ರೂ. ಹೊರೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಹೆಚ್ಚುವರಿ ಹೊರೆಯನ್ನು ಪ್ರಯಾಣಿಕರ ಮೇಲೆ ಹೊರಿಸಬೇಕಾಗುತ್ತದೆ. ಬಡವರು ಬಸ್ ಹತ್ತುವುದು ಕಷ್ಟವಾಗಲಿದೆ ಎಂದು ಎಚ್ಚರಿಸಿದರು.
ಕಲ್ಲಾಪುರ ಮತ್ತು ಕುಟ್ರಳ್ಳಿಯಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಸ್ಥಳೀಯರು, ರೈತರು, ವಿವಿಧ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ದಶಕದ ಹಿಂದೆ ನಿರ್ಮಾಣವಾದ ರಸ್ತೆಗೆ ಟೋಲ್ ವಿಧಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net