

ತರೀಕೆರೆ: ತಾಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಗೈರಾದ ಅಧಿಕಾರಿಗಳ ನಡೆ ಖಂಡಿಸಿ ತಾಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ವಿವಿಧ ಸರ್ಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಾಗೃತಿ ಮೂಡಿಸಿದರು.
ಬಿಇಒ, ಪಿಡಬ್ಲುೃಡಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಅರಣ್ಯ ಇಲಾಖೆ, ಭೂ ದಾಖಲೆಗಳ ಇಲಾಖೆ ಮತ್ತಿತರ ಕಚೇರಿ ಬಳಿ ತೆರಳಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕಿಡಿಕಾರಿದರಲ್ಲದೆ, ಮುಂದೆ ಈ ರೀತಿಯ ಧೋರಣೆ ಅನುಸರಿಸಿದರೆ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿ ಆಯಾ ಕಚೇರಿ ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಬಿ.ಎಸ್.ಭಗವಾನ್, ತಾಲೂಕು ಅಧ್ಯಕ್ಷ ನವೀನ್ ಪೆನ್ನಯ್ಯ, ಜಿಲ್ಲಾ ಕಸಾಪ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ರಮೇಶ್, ತಾಲೂಕು ಅಧ್ಯಕ್ಷ ನವೀನ್, ತಾಲೂಕು ಯುವ ಘಟಕ ಅಧ್ಯಕ್ಷ ಇಮ್ರಾನ್ ಖಾನ್ ಮತ್ತಿತರರಿದ್ದರು.