

ಶಿವಮೊಗ್ಗ: ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದ ನೇತೃತ್ವದಲ್ಲಿ ಶರಾವತಿ ಅಂತರ್ಗತ ಜಲ ವಿದ್ಯುತ್ ಯೋಜನೆ ಮತ್ತು ಶರಾವತಿ ನದಿ ತಿರುವು ವಿರೋಧಿಸಿ ಮಾ.19ರಂದು ನಗರದ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಒಕ್ಕೂಟದ ಕಾರ್ಯಾಧ್ಯಕ್ಷ, ಮೂಲೆಗದ್ದೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಗ್ಗೆ 10.30ಕ್ಕೆ ಪ್ರತಿಭಟನಾ ಸಭೆ ನಡೆಯಲಿದೆ. ಬಳಿಕ ಎರಡೂ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಒಕ್ಕೂಟ ಮನವಿ ಸಲ್ಲಿಸಲಿದೆ.
ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಾಗಿ ಈಗಾಗಲೇ ಜನರು ಭೂಮಿ ಕಳೆದುಕೊಂಡಿದ್ದಾರೆ. ಇದೀಗ ಗಾಯದ ಮೇಳೆ ಬರೆ ಎಳೆದಂತೆ ರಾಜ್ಯ ಸರ್ಕಾರ ಕೇಂದ್ರದ ನೆರವಿನೊಂದಿಗೆ ಮತ್ತೆರಡು ಹೊಸ ಯೋಜನೆ ರೂಪಿಸಿದೆ. ಈ ಯೋಜನೆಗಳು ನೀತಿ, ನಿಯಮಕ್ಕೆ ವಿರುದ್ಧವಾಗಿವೆ. ಕಾಯ್ದೆಗಳನ್ನು ಗಾಳಿಗೆ ತೂರಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಹೋರಾಟಕ್ಕೆ ಪರಿಸರವಾದಿಗಳು ಸಜ್ಜಾಗಿದ್ದಾರೆ.
ಒಕ್ಕೂಟದ ಪ್ರಮುಖ, ಪರಿಸರವಾದಿ ಪ್ರೊ. ಎಲ್.ಕೆ.ಶ್ರೀಪತಿ ಮಾತನಾಡಿ, ಶರಾವತಿ ನದಿ ತಿರುವು ಯೋಜನೆ ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುವುದೇ ಆಗಿದೆ. ಆದರೆ ಈಗಾಗಲೇ ಈ ಯೋಜನೆಯನ್ನು ನಾವು ವಿರೋಧಿಸುತ್ತ ಬಂದಿದ್ದೇವೆ. ಲಿಂಗನಮಕ್ಕಿಯಲ್ಲೇ ನೀರು ಇರುವುದಿಲ್ಲ. ಇನ್ನು ಬೆಂಗಳೂರಿಗೆ ಕೊಡುವಷ್ಟು ನೀರು ಒದಗಿಸಲು ಹೇಗೆ ಸಾಧ್ಯ? ಈಗಾಗಲೇ ಈ ಯೋಜನೆಗೆ ಖಾಸಗಿ ಕಂಪನಿಯೊಂದಕ್ಕೆ ಸರ್ವೇ ಮಾಡಲು 73 ಲಕ್ಷ ರೂ. ನೀಡಲಾಗಿದೆ. ಈ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಮಲೆನಾಡ ಜನತೆ ಕಷ್ಟ ಪಡುತ್ತಿರುವಾಗ ಸ್ಥಳೀಯರಿಗೆ ಲಭ್ಯವಾಗಬೇಕಾದ ಸಂಪತ್ತು, ಬೆಂಗಳೂರಿಗೆ ನೀಡುವುದು ಯಾವ ನೈಸರ್ಗಿಕ ನ್ಯಾಯ ಎಂದು ಪ್ರಶ್ನಿಸಿದರು.
ಎರಡೂ ಯೋಜನೆಗಳು ಬಹುದೊಡ್ಡ ಮೊತ್ತದ ಯೋಜನೆಗಳಾಗಿವೆ. ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಅವೈಜ್ಞಾನಿಕವಾಗಿ ಪರಿಸರ ನಾಶ ಮಾಡುವ ಯೋಜನೆಗಳಾಗಿವೆ. ಈ ಎರಡೂ ಯೋಜನೆಗಳನ್ನು ಶಾಶ್ವತವಾಗಿ ರದ್ದು ಮಾಡಬೇಕು ಎಂದು ಒಕ್ಕೂಟದ ಪ್ರಮುಖ ಅಖಿಲೇಶ್ ಚಿಪ್ಳಿ ಒತ್ತಾಯಿಸಿದರು. ಪ್ರಮುಖರಾದ ಕಾಂತೇಶ್ ಕದರಮಂಡಲಗಿ, ಸೀಮಾ, ಅಶೋಕ್‌ಕುಮಾರ್, ಪ್ರಕಾಶ್, ನಾಗರಾಜ್, ಬಾಲಕೃಷ್ಣ, ನವ್ಯಶ್ರೀ ನಾಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.