

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಬಾಲಣ್ಣ ಸೇರಿದಂತೆ ಕೆಲ ಆನೆಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇವುಗಳ ಆರೈಕೆಯಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಜಿಲ್ಲಾ ಘಟಕದ ಪ್ರಮುಖರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಾಲಣ್ಣ ಸೇರಿದಂತೆ ನಾಲ್ಕು ಆನೆಗಳ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದೆ. ಬಾಲಣ್ಣ ಎಂಬ ಆನೆಯ ಕಿವಿ ಕೊಳೆಯುತ್ತಿದೆ. ಮೂಕ ಪ್ರಾಣಿಗಳಿಗೆ ಈ ರೀತಿಯ ಚಿತ್ರಹಿಂಸೆ ಆಗುತ್ತಿರುವುದು ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಈ ನಿರ್ಲಕ್ಷೃವೇಕೆ? ಆರ್‌ಎಫ್‌ಒ ಮತ್ತು ಡಿಎಫ್‌ಒ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಸಕ್ರೆಬೈಲು ಕ್ಯಾಂಪಿನಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಯಿಲ್ಲ. ಬಿಡಾರಕ್ಕೆ ವೈದ್ಯರೂ ಇಲ್ಲ. ಕೂಡಲೇ ಇಲ್ಲಿಗೆ ತಜ್ಞ ವೈದ್ಯಾಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಎಂ.ರವಿಪ್ರಸಾದ್, ಜಿಲ್ಲಾಧ್ಯಕ್ಷ ಮಧುಸೂದನ್, ಪ್ರಮುಖರಾದ ನಯಾಜ್, ಅಭಿಜಿತ್, ಪ್ರಶಾಂತ್, ನೂರುಲ್ಲ, ರಾಘವೇಂದ್ರ, ವಿನಯ್, ಅರುಣ್, ಶರತ್, ವೆಂಕಟೇಶ್, ಮುಕುಂದ, ಶಶಿ, ಲಿಂಗಣ್ಣ, ರವಿಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.