ಶಾಸಕಿ ಶಾರದಾ ಪೂರ‌್ಯಾನಾಯ್ಕಾಗೆ ಅವಮಾನ: ಪ್ರತಿಭಟನೆ

sims protest
ಸಿಮ್ಸ್ ಬೋಧನಾ ಆಸ್ಪತ್ರೆ ಎದುರು ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿದರು. ಕಡಿದಾಳ್ ಗೋಪಾಲ್, ನರಸಿಂಹ, ಗೀತಾ ಸತೀಶ್, ಮಧು, ಸಂಗಯ್ಯ, ಕಾಂತರಾಜ್, ನಿಖಿಲ್, ತ್ಯಾಗರಾಜ ಮುಂತಾದವರಿದ್ದರು.
Published on

ಶಿವಮೊಗ್ಗ: ಸಿಮ್ಸ್ ಬೋಧನಾ ಆಸ್ಪತ್ರೆ ಮತ್ತು ಕಾಲೇಜಿಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ಒದಗಿಸುತ್ತಿರುವ ಕೆಎಸ್‌ಎಫ್-9 ಸರ್ವೀಸಸ್ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅವರೊಂದಿಗಿನ ಗುತ್ತಿಗೆ ರದ್ದುಪಡಿಸಬೇಕು. ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಅವರನ್ನು ಅವಮಾನಿಸಿದ ಈ ಸಂಸ್ಥೆಯ ನೌಕರನನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಸೋಮವಾರ ಸಿಮ್ಸ್ ಬೋಧನಾ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಮೆಗ್ಗಾನ್ ಆಸ್ಪತ್ರೆ ಮತ್ತು ಸಿಮ್ಸ್ ಸಂಸ್ಥೆಯ ಆಸ್ಪತ್ರೆಯಲ್ಲಿ ಭದ್ರತಾ ಕಾರ್ಯಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಕೆಎಸ್‌ಎಫ್-9 ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಸೆ.27ರ ಮಧ್ಯಾಹ್ನ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಸಂಸ್ಥೆಯ ವ್ಯವಸ್ಥಾಪಕರಿಗೆ ಕರೆ ಮಾಡಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಭದ್ರತಾ ಸಿಬ್ಬಂದಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬಗ್ಗೆ ವಿಚಾರಿಸಿದ್ದರು.

ಈ ವೇಳೆ ವ್ಯವಸ್ಥಾಪಕ ಅ್ಞಅವಶ್ಯಕವಾಗಿ ಶಾಸಕರಿಗೆ ಅಗೌರವ ತೋರಿದ್ದಾನೆ. ಜಾತಿನಿಂದನೆಯನ್ನೂ ಮಾಡಿದ್ದಾನೆ. ಹೀಗಾಗಿ ವ್ಯವಸ್ಥಾಪಕ ಹಾಗೂ ಸಂಸ್ಥೆ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಜಿಲ್ಲಾ ಸರ್ಜನ್ ಡಾ. ಸಿದ್ಧನ ಗೌಡ ಪಾಟೀಲ್, ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ವ್ಯವಸ್ಥಾಪಕ ಕಾರ್ಯನಿಮಿತ್ತ ಹಾಸನಕ್ಕೆ ತೆರಳಿದ್ದಾರೆ. ಅವರು ವಾಪಸಾದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಗಂಧದ ಮನೆ ನರಸಿಂಹ, ಕಾಂತರಾಜ್, ನಿಖಿಲ್, ಮಧು, ಸಂಗಯ್ಯ, ತ್ಯಾಗರಾಜ್, ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net