

ತೀರ್ಥಹಳ್ಳಿ: ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮನೆಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ ತುಪ್ಪದಮನೆ ಬುಧವಾರ ಹೊದಲ ಗ್ರಾಪಂ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಸರ್ಕಾರದ ಸವಲತ್ತುಗಳನ್ನು ತಾಲೂಕಿನ ಎಲ್ಲ 38 ಗ್ರಾಪಂಗಳ ಅರ್ಹ ಫಲಾನುಭವಿಗಳಿಗೆ ಸಮಾನವಾಗಿ ವಿತರಿಸಬೇಕಿತ್ತು. ಆದರೆ ಹೊದಲ ಗ್ರಾಪಂ ವ್ಯಾಪ್ತಿಯಿಂದ 200ಕ್ಕೂ ಹೆಚ್ಚು ನಿವೇಶನ ರಹಿತರಿಂದ ಅರ್ಜಿ ಸಲ್ಲಿಕೆಯಾಗಿದ್ದರೂ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇವಲ ಒಂದು ಮನೆ ನೀಡುವ ಮೂಲಕ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ವಸತಿ ಯೋಜನೆಗೆ ಶಾಸಕರೇ ಮುಖ್ಯಸ್ಥರು. ಬಡವರಿಗೆ ಸಿಗಬೇಕಾದ ಸವಲತ್ತುಗಳ ವಿತರಣೆಯಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದರೆ ಶಾಸಕರೇ ಸರಿಪಡಿಸಬೇಕಿದೆ. ಮನೆಗಳ ವಿತರಣೆಯಲ್ಲಾದ ತಾರತಮ್ಯ ನೀತಿ ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಶಾಸಕರ ವಿರುದ್ಧ ತಾಪಂ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಎಲ್ಲ ವಿಚಾರಗಳಲ್ಲೂ ರಾಜಕೀಯ ದೃಷ್ಟಿಯಿಂದಲೇ ತೀರ್ಮಾನ ಕೈಗೊಳ್ಳುವ ಶಾಸಕ ಆರಗ ಜ್ಞಾನೇಂದ್ರ ಅವರ ಪಕ್ಷಪಾತ ಧೋರಣೆಯಿಂದಾಗಿ ಅರ್ಹ ಫಲಾನುಭವಿಗಳು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಶಾಸಕರ ಈ ಧೋರಣೆ ಖಂಡಿಸಿ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯ ಎಂದರು.
ತೀರ್ಥಹಳ್ಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಭಾಂಡ್ಯ-ಕುಕ್ಕೆ ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಗ್ರಾಪಂ ಚುನಾಯಿತ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಯು.ಡಿ.ವೆಂಕಟೇಶ್, ಜಿಲ್ಲಾ ಒಕ್ಕೂಟದ ಸದಸ್ಯ ಭುಜಂಗ ಶೆಟ್ಟಿ, ತಾಲೂಕು ಒಕ್ಕೂಟದ ಸದಸ್ಯ ಹೆಬ್ಬುಲಿಗೆ ಉಮೇಶ್, ಕಾನುಕೊಪ್ಪ ಮಂಜುನಾಥ್, ಬಾಳೇಹಳ್ಳಿ ಪ್ರಭಾಕರ್, ನಿಶ್ಚಿತಾ, ಸತೀಶ್ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.