

ನಂಜನಗೂಡು: ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಶುಕ್ರವಾರ ನಗರದದಲ್ಲಿ ಪ್ರತಿಭಟನೆ ನಡೆಸಿದರು.
ಮಿನಿವಿಧಾನಸೌಧದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಬಿ.ಎಸ್.ಯಡಿಯೂರಪ್ಪ ರೈತಾಪಿ ವರ್ಗಕ್ಕೆ ಮರಣ ಶಾಸನವಾಗಿರುವ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ ಎಂದು ಆರೋಪಿಸಿದರು.
ಈ ತಿದ್ದುಪಡಿಯಿಂದ ಬಂಡವಾಳಶಾಹಿಗಳು ರೈತರ ಭೂಮಿಯನ್ನು ಲಪಟಾಯಿಸುವಲ್ಲಿ ಸಂದೇಹವೇ ಇಲ್ಲ. ಬಂಡವಾಳಶಾಯಿಗಳ ಹಿತಕ್ಕಾಗಿ ರೈತ ಕುಲಕ್ಕೆ ಮಾರಕವಾಗಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹೊರಡಿಸಿರುವುದು ಸರ್ಕಾರ ಅವಿವೇಕದ ನಿರ್ಧಾರವಾಗಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಉದ್ಯೋಗವಿಲ್ಲದೇ ಪರಿತಪಿಸುತ್ತಿರುವ ಬಡವರ್ಗದ ಜನರು ಕೃಷಿ ಭೂಮಿಯನ್ನೇ ಅವಲಂಬಿಸಿಕೊಂಡು ದುಡಿಮೆ ಮಾಡುತ್ತಿರುವ ಹೊತ್ತಲ್ಲಿ ಸದನದಲ್ಲಿ ಚರ್ಚೆಗೆ ತರದೇ ಏಕಾಏಕಿ ತಿದ್ದುಪಡಿ ತಂದಿರುವ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ರೈತಾಪಿ ವರ್ಗ ದಂಗೆ ಏಳಲಿದೆ ಎಂದು ಎಚ್ಚರಿಸಿದರು.
ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ರವಿ ಗಂಡತ್ತೂರು, ಕೋಶಾಧ್ಯಕ್ಷ ಚನ್ನಪ್ಪ, ತಾಲೂಕು ಅಧ್ಯಕ್ಷ ಆಯರಹಳ್ಳಿ ಪ್ರಭುಸ್ವಾಮಿ, ಉಪಾಧ್ಯಕ್ಷ ಏಚಗುಂಡ್ಲ ಶಿವಕುಮಾರ್, ಗಿರೀಶ್ ಹುಸ್ಕೂರು, ಮಲ್ಕುಂಡಿ ಶಿವಚನ್ನಪ್ಪ, ಮುದ್ದಣ್ಣ, ಪ್ರದೀಪ್ ಭಾಗವಹಿಸಿದ್ದರು.
ಹರಿಹಾಯ್ದ ತಹಸೀಲ್ದಾರ್: ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದರೂ ಮನವಿ ಸ್ವೀಕರಿಸಲು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದರಿಂದ ಬೇಸತ್ತ ಪ್ರತಿಭಟನಕಾರರು ಬಾಗಿಲು ಮುಚ್ಚಿದ್ದ ತಾಲೂಕು ಕಚೇರಿಯ ದ್ವಾರದ ಬಳಿ ತೆರಳಿ ಜೋರು ಧ್ವನಿಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್ ಅನುಮತಿ ಪಡೆಯದೆ ಏಕಾಏಕಿ ಪ್ರತಿಭಟನೆ ನಡೆಸಿದ್ದೀರಿ ಎಂದು ಹರಿಹಾಯ್ದರು. ಸೆಕ್ಷನ್ 144 ಜಾರಿಯಲ್ಲಿದ್ದು, ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ವೇಳೆ ಪ್ರತಿಭಟನಾಕಾರರು ಮನವಿ ಸಲ್ಲಿಸಲು ಮುಂದಾದರೂ ಸ್ವೀಕರಿಸಲು ನಿರಾಕರಿಸಿದರು. ನಂತರ ಪ್ರತಿಭಟನಾಕಾರರು ಸ್ಥಳದಿಂದ ಹೊರನಡೆದರು.