

ಶಿವಮೊಗ್ಗ: ಒಳ್ಳೆಯ ದಿನಗಳು ಬರಲಿವೆ ಎಂದು ಪ್ರಚಾರ ಮಾಡಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯೇರಿದ್ದ ಬಿಜೆಪಿ ಪ್ರತಿನಿತ್ಯ ಜನಸಾಮಾನ್ಯರ ಮೇಲೆ ಪ್ರಹಾರ ಮಾಡುತ್ತಿದೆ. ಇದೀಗ ರಸಗೊಬ್ಬರ ಬೆಲೆ ಹೆಚ್ಚಿಸುವ ಮೂಲಕ ಕೃಷಿಕರಿಗೆ ಆಘಾತ ಉಂಟುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಫ್ಕೋ 15-15-15 ರಸಗೊಬ್ಬರದ ಬೆಲೆ 1,250 ರೂ.ನಿಂದ 1,650 ರೂ.ಗೆ ಹೆಚ್ಚಳವಾಗಿದೆ. ಆರ್‌ಸಿಎಫ್ 15-15-15ರ ಬೆಲೆ 1,470 ರೂ.ನಿಂದ 1,650 ರೂ. ಆಗಿದೆ. ಇಫ್ಕೋ 10-26-26 ಕಳೆದ ವರ್ಷ 1,470 ರೂ. ಇತ್ತು. ಈ ವರ್ಷ ಅದರ ಬೆಲೆ 1,725 ರೂ.ಗೆ ಏರಿಕೆಯಾಗಿದೆ. 1,250 ರೂ. ಇದ್ದ 20-20-0-13ರ ಬೆಲೆ 1,300 ರೂ.ಗೆ ಹೆಚ್ಚಿದೆ. 12-32-16ರ ಬೆಲೆ 1,470 ರೂ.ನಿಂದ 1,725 ರೂ.ಗೆ ಏರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
20-20-20ರ ಬೆಲೆ 1,020 ರೂ.ಗಳಿಂದ 1,360 ರೂ.ಗೆ, ಯೂರಿಯಾ 266 ರೂ.ಗಳಿಂದ 280 ರೂ.ಗಳಿಗೆ ಹಾಗೂ ಎಂಒಪಿ 1,550 ರಿಂದ 1,750 ರೂ.ಗೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಕೃಷಿ ಸಮ್ಮಾನ್ ಬಾಬ್ತು ವರ್ಷಕ್ಕೆ ಆರು ಸಾವಿರ ರೂ. ನೀಡಿ ಗೊಬ್ಬರ, ಕೀಟನಾಶಕ, ರಾಸಾಯನಿಕ, ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡುವ ಮೂಲಕ ಅದಕ್ಕಿಂತ ದುಪ್ಪಟ್ಟು ಹಣವನ್ನು ರೈತರಿಂದ ವಸೂಲು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಕಿಸಾನ್ ಸೆಲ್ ಕಾರ್ಯಾಧ್ಯಕ್ಷ ಗಿರೀಶ್, ಪ್ರಮುಖರಾದ ಹಾಲಪ್ಪ, ಶಿವಾನಂದ್, ಮಧುಸೂದನ್, ಚೇತನ್, ಚರಣ್ ಮುಂತಾದವರಿದ್ದರು.