

ಚನ್ನಪಟ್ಟಣ : ನೂತನವಾಗಿ ನಿರ್ವಾಣವಾಗುತ್ತಿರುವ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ನೀರು ಕಾಲುವೆೆಯನ್ನು ಮುಚ್ಚಿರುವುದನ್ನು ಖಂಡಿಸಿ ತಾಲೂಕಿನ ಬೈರಾಪಟ್ಟಣ ಗ್ರಾಮಸ್ಥರು ಕಾಮಗಾರಿಯನ್ನು ತಡೆದು ಬುಧವಾರ ಪ್ರತಿಭಟನೆ ನಡೆಸಿದರು.
ಬೈರಾಪಟ್ಟಣ ಬಳಿ ಹಾದು ಹೋಗಿರುವ ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ನೀರು ಹರಿಯಲು ಕಾಲುವೆ ಇತ್ತು. ಕಾಮಗಾರಿಗಾಗಿ ಈ ಕಾಲುವೆಯನ್ನು ಹಲವು ತಿಂಗಳ ಹಿಂದೆ ಮುಚ್ಚಿರುವುದು ಸಾಕಷ್ಟು ತೊಂದರೆಯಾಗಿ ಪರಿಣಮಿಸಿದೆ. ಇದರಿಂದ ಮಳೂರು ಕೆರೆಯ ಅಚ್ಚುಕಟ್ಟು ಪ್ರದೇಶವಾಗಿದ್ದು, ಹೆದ್ದಾರಿಯ ಎರಡು ಬದಿಯಲ್ಲಿ ರೈತರ ಗದ್ದೆಗಳಿವೆ.
ಒಂದು ಬದಿಯಿಂದ ಮತ್ತೊಂದು ಬದಿಗೆ ಹೆದ್ದಾರಿ ದಾಟಿ ಹೋಗುವ ನೀರು ಕಾಲುವೆಯನ್ನು ರಸ್ತೆ ಗುತ್ತಿಗೆ ವಹಿಸಿಕೊಂಡಿರುವ ಡಿಬಿಎಲ್ ಸಂಸ್ಥೆ ಮುಚ್ಚಿರುವುದರಿಂದ ನೀರು ರೈತರ ಜಮೀನಿನಲ್ಲಿ ಸಂಗ್ರಹವಾಗುತ್ತಿದೆ. ಕೆರೆಯ ಸೋರಲು ನೀರು ಹಾಗೂ ಮಳೆ ನೀರು ಹರಿಯಲು ಸಾಧ್ಯವಾಗದೆ, ಜಮೀನುಗಳು ಮಿನಿ ಕೆರೆಯಂತೆ ಬದಲಾಗಿವೆ. ಭತ್ತ ನಾಟಿ ವಾಡಿರುವ ಗದ್ದೆಗಳಲ್ಲಿ ಆಳುದ್ದ ನೀರು ನಿಂತು ಬೆಳೆ ಸಂಪೂರ್ಣ ನಾಶವಾಗಿದೆ.
ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ನೂರಾರು ಎಕರೆ ಬೆಳೆ ಹಾಳಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಭರವಸೆ : ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಬಿಎಲ್ ಸಂಸ್ಥೆ ಅಧಿಕಾರಿಗಳು ಕಾಲುವೆಯನ್ನು ತೆರವುಗೊಳಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂದಕ್ಕೆ ಪಡೆದರು.