

ಸೊರಬ: ದಾಸ ಸಾಹಿತ್ಯ ಪರಂಪರೆಯನ್ನು ಉಳಿಸುವಲ್ಲಿ ಮಠಗಳ ಕೊಡುಗೆ ಅಪಾರ. ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಜಿಲ್ಲಾ ಆದಿಚುಂಚನಗಿರಿ ಸಂಸ್ಥಾನ ಮಠ ಮಾಡುತ್ತಿದೆ ಎಂದು ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜಪ್ಪ ಬನದಕೊಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಬುಧವಾರ ಆದಿಚುಂಚನಗಿರಿ ಮಹಾ ಸಂಸ್ಥಾನ ಶಿವಮೊಗ್ಗ ಶಾಖಾ ಮಠ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪುರಂದರದಾಸರ ಕೀರ್ತನೆಗಳ ಗಾಯನ ಮತ್ತು ಭಾಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾ ಪ್ರಪಂಚದಲ್ಲಿ ದಾಸ ಸಾಹಿತ್ಯದ ಮೌಲ್ಯಗಳನ್ನು ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಇಂತಹ ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು. ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ದೊರೆಯಬೇಕಿದೆ. ಇದರಿಂದ ಜ್ಞಾನ ಹೆಚ್ಚಿಸಿಕೊಳ್ಳುವ ಜತೆಗೆ ಸ್ಪರ್ಧಾ ಕೌಶಲ ಹೆಚ್ಚಿಸಿಕೊಳ್ಳಬಹುದು ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಂ.ಸುರೇಶ್ ಮಾತನಾಡಿ, ದಾಸ ಶ್ರೇಷ್ಠರಲ್ಲಿ ಒಬ್ಬರಾದ ಪುರಂದರದಾಸರನ್ನು ಕರ್ನಾಟಕದ ಸಂಗೀತದ ಪಿತಾಮಹ ಎಂದು ಬಣ್ಣಿಸಲಾಗಿದೆ. ಸಮಾಜದಲ್ಲಿರುವ ಮೌಢ್ಯ ಹಾಗೂ ಅಂಧಕಾರಗಳನ್ನು ತೊಡೆದುಹಾಕಲು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಕೀರ್ತನೆಗಳನ್ನು ರಚನೆ ಮಾಡಿದ್ದಾರೆ. ದಾಸ ಸಾಹಿತ್ಯವನ್ನು ಜನರಿಗೆ ಸರಳವಾಗಿ ಅರ್ಥೈಸುವಂತೆ ಸಂಗೀತ ಹಾಗೂ ಸಾಹಿತ್ಯ ರೂಪದಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಿದರು ಎಂದು ತಿಳಿಸಿದರು.
ಪುರಂದರದಾಸರು ಗಾಯನದ ಮೂಲಕ ಸಮಾಜ ಪರಿವರ್ತನೆ ಮಾಡುವ ಜತೆಗೆ ಜೀವನದ ಮೌಲ್ಯಗಳು ಸರಳವಾಗಿ ಅರ್ಥವಾಗುವ ರೀತಿ ಸಾಹಿತ್ಯ ರಚಿಸಿದರು. ಹರಿದಾಸರ ಭಕ್ತಿ ಚಳವಳಿ ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಮಹತ್ತರ ತಿರುವು ನೀಡಿದವು. ಇಂದು ಮಠಗಳ ದಾಸ ಪರಂಪರೆಯನ್ನು ಯುವ ಪೀಳಿಗೆಗೆ ತಲುಪಿಸುವ ಮೂಲಕ ಸಾರ್ವತ್ರಿಕಗೊಳಿಸಲು ಶ್ರಮಿಸುತ್ತಿರುವುದು ಶ್ಲಾಘನಿಯ ಎಂದರು.
ಉಪ ಪ್ರಾಚಾರ್ಯ ಡಿ.ಫಕ್ಕೀರಪ್ಪ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಓದುವ ಹಾವ್ಯಾಸವನ್ನೇ ಮರೆತಿದ್ದಾರೆ. ಇದರಿಂದ ಶಿಕ್ಷಣದ ಮೌಲ್ಯಗಳು ಕುಸಿಯುತ್ತಿವೆ. ಇದರ ನಡುವೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಠಗಳು ಮಕ್ಕಳಿಗೆ ಸಂಸ್ಕಾರದ ವಿಚಾರಗಳನ್ನು ಬಿತ್ತುವ ಮೂಲಕ ಎಚ್ಚರಗೊಳಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಾಚಾರ್, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ, ಪ್ರವೀಣ್ ಭಂಡಾರಿ, ಕಸಾಪ ಸದಸ್ಯರಾದ ಲಿಂಗರಾಜ ಗೌಡ, ರೇವಣಪ್ಪ ಇತರರಿದ್ದರು.