ಸರ್ಕಾರದ ಹೊಸ ಕಾಯ್ದೆಯಡಿ ಹಿರಿಯ ನಾಗರಿಕರಿಗೆ ರಕ್ಷಣೆ

SRP_17-01jpj
ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಪರಶುರಾಮ್ ಸತ್ತಿಗೇರಿ, ಎಸ್‌ಎಸ್.ಕೋಮಲ್‌ಕುಮಾರ್, ಎ.ಎಂ.ನಟರಾಜು, ಎ.ಆರ್.ಅನಿಲ್‌ಬಾಬು ಇದ್ದರು.
Published on

ಶ್ರೀರಂಗಪಟ್ಟಣ: ಅರವತ್ತು ವರ್ಷ ಮೇಲ್ಪಟ್ಟವರು ಹಿರಿಯ ನಾಗರಿಕರಾಗಿದ್ದು, ತಮ್ಮ ಸ್ವಂತ ಗಳಿಕೆ ಅಥವಾ ತಮ್ಮ ಒಡೆತನದ ಆಸ್ತಿಯಿಂದ ತಮ್ಮನ್ನು ಪೋಷಿಸಿಕೊಳ್ಳಲು ಸಾಧ್ಯವಾಗದ ಪಾಲಕರು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಸಂರಕ್ಷಣಾ ಕಾಯ್ದೆ-2007ರ ಅಡಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ತಿಳಿಸಿದರು.

ತಾಲೂಕಿನ ಅರಕೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಸ್ತೂರಬಾ ಗಾಂಧಿ ವೃದ್ಧಾಶ್ರಮ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ಜಾಗೃತಿ ದಿನಾಚರಣೆಯಲ್ಲಿ ಸಸಿಗೆ ನೀರೆರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂದೆ-ತಾಯಿ ನಮ್ಮ ದೇವರಿದ್ದಂತೆ. ಯಾರೇ ಆಗಲಿ ತಮ್ಮ ಹೆತ್ತವರನ್ನು ದೇವರಂತೆ ಕಾಣಬೇಕು. ಮಕ್ಕಳು ಅಥವಾ ಮೊಮ್ಮಕ್ಕಳು ತಮ್ಮ ಪಾಲಕರನ್ನು ಪೋಷಿಸುವ ಜವಾಬ್ದಾರಿ ಹೊಂದಿರುತ್ತಾರೆ. ಅಥವಾ ಅವರ ರಕ್ತ ಸಂಬಂಧಿಯೂ ಸಹ ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಬದ್ಧರಾಗಿರುತ್ತಾರೆ. ಆದರೆ ಇಂತಹ ಹೆತ್ತವರು ಅಥವಾ ಹಿರಿಯ ನಾಗರಿಕರು ಯಾರ ರಕ್ಷಣೆಗೂ ಒಳಪಡದಿದ್ದರೆ ಈ ಕಾಯ್ದೆಯಡಿಯಲ್ಲಿ ರಚಿಸಲಾದ ನ್ಯಾಯಮಂಡಳಿಯ ಸಹಾಯ ಪಡೆದು, ಅರ್ಜಿ ಸಲ್ಲಿಸಿ ಜೀವನಾಂಶದ ಪರಿಹಾರ ಪಡೆಯಬಹುದು ಎಂದರು.

ರಾಷ್ಟ್ರೀಯ ಮಾನವ ಹಕ್ಕುಗಳ ತರಬೇತುದಾರ ಎಂ.ಗುರುಪ್ರಸಾದ್ ಮಾತನಾಡಿ, ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಸಂರಕ್ಷಣಾ ಕಾಯ್ದೆಯಡಿ ಲಭ್ಯವಿರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳು ಪಡೆಯಬಹುದಾಗಿದೆ. ಹಿರಿಯ ನಾಗರಿಕರು ಕುಟುಂಬದಲ್ಲಿ ತಮ್ಮ ಮಕ್ಕಳಿಗೆ ಭಾಗಾಂಶ, ದಾನಪತ್ರ, ವಿಲ್ ಇತರ ದಾಖಲೆಗಳನ್ನು ವರ್ಗಾವಣೆ ಮಾಡಿ ಬಳಿಕ ಅಂತಹ ಮಕ್ಕಳಿಂದ ಸರಿಯಾದ ಪೋಷಣೆ, ರಕ್ಷಣೆ ಸಿಗದೆ ಕಿರುಕುಳಕ್ಕೆ ಒಳಗಾದಾಗ ತಮ್ಮ ವ್ಯಾಪ್ತಿಯಲ್ಲಿ ಇರುವ ಉಪ-ವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ತಿಳಿಸಿ ನಂತರ ಸೂಕ್ತ ದಾಖಲೆಗಳನ್ನು ರದ್ದು ಮಾಡುವ ಅಧಿಕಾರ ಆ ಅಧಿಕಾರಿಗಳಿಗಿದೆ. ಸಂಬಂಧಪಟ್ಟ ಆಸ್ತಿಯು ಮತ್ತೆ ವಾರಸುದಾರರ ಹೆಸರಿಗೆ ಲಭಿಸುತ್ತದೆ. ಜತೆಗೆ ಕಾನೂನು ರೀತ್ಯ ಅಂತಹ ಮಕ್ಕಳ ವಿರುದ್ಧ ದೂರು ನೀಡಿದಲ್ಲಿ 3 ತಿಂಗಳ ಕಾರಾಗೃಹ ವಾಸ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಪ್ರತಿಯೊಬ್ಬ ಹಿರಿಯ ನಾಗರಿಕರು ಆತ್ಮಸ್ಥೆರ್ಯ ಕಳೆದುಕೊಳ್ಳದೆ ಧೈರ್ಯವಾಗಿ ಜೀವನ ನಡೆಸುವಂತೆ ಮನವಿ ಮಾಡಿದ ಅವರು, ನಿಮಗೆ ಏನೇ ಸಮಸ್ಯೆಯಿದ್ದರೂ ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಭೇಟಿ ಮಾಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಶ್ರವಣ ಸಮಸ್ಯೆ ಇರುವ ಹಿರಿಯ ನಾಗರಿಕರಿಗೆ ಉಚಿತವಾಗಿ ಯಂತ್ರೋಪಕರಣ ವಿತರಿಸಲಾಯಿತು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪನಿರ್ದೇಶಕ ಎನ್.ರಾಜಮೂರ್ತಿ, ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್, ಕಾರ್ಯದರ್ಶಿ ಎ.ಎಂ.ನಟರಾಜು, ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್‌ನ ವಲಯ ಅಧ್ಯಕ್ಷ ಎ.ಆರ್.ಅನಿಲ್ ಬಾಬು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net