ಜನರ ಆರೋಗ್ಯ ರಕ್ಷಿಸಿ

ವಿಜಯವಾಣಿ (2)
Published on

ಎಲ್ಲೆಲ್ಲೂ ಈಗ ಕಲಬೆರಕೆ ಮತ್ತು ಕಳಪೆ ಉತ್ಪನ್ನಗಳ ಸಮಸ್ಯೆ ವ್ಯಾಪಿಸಿಕೊಂಡಿದೆ. ಆಹಾರ ಪದಾರ್ಥಗಳ ವಿಷಯದಲ್ಲಿ ವ್ಯಾಪಕವಾಗಿದ್ದ ಈ ಸಮಸ್ಯೆ, ಈಗ ಔಷಧಕ್ಕೂ ವಿಸ್ತರಣೆಯಾಗಿದೆ. ನವೆಂಬರ್​ನಲ್ಲಿ ನಡೆಸಿದ ಗುಣಮಟ್ಟ ಪರೀಕ್ಷೆಯಲ್ಲಿ 111 ಔಷಧ ಸ್ಯಾಂಪಲ್​ಗಳು ಅನುತ್ತೀರ್ಣವಾಗಿವೆ ಎಂದು ಕೇಂದ್ರೀಯ ಔಷಧ ಮಾನಕ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ) ಪ್ರಕಟಿಸಿದೆ. ಅವುಗಳನ್ನು ‘ನಿಗದಿತ ಮಾನದಂಡ ಗುಣಮಟ್ಟದ್ದಲ್ಲ’ (ಎನ್​ಎಸ್​ಕ್ಯೂ) ಎಂದು ಸಂಸ್ಥೆ ತಿಳಿಸಿದೆ.

111 ಔಷಧಗಳ ಪೈಕಿ 41ನ್ನು ಕೇಂದ್ರೀಯ ಪ್ರಯೋಗಾಲಯ ಮತ್ತು ಉಳಿದ 70ನ್ನು ರಾಜ್ಯ ಲ್ಯಾಬ್​ಗಳಲ್ಲಿ ಪರೀಕ್ಷಿಸಲಾಗಿತ್ತು. ಇದು ಮೊದಲ ಪ್ರಕರಣವೇನಲ್ಲ. ಈ ಹಿಂದೆ 2024ರ ಸೆಪ್ಟೆಂಬರ್​ನಲ್ಲಿ ನಡೆಸಲಾದ ಪರೀಕ್ಷೆಯಲ್ಲೂ ದೇಶದ ಪ್ರಮುಖ ಫಾರ್ವ ಕಂಪನಿಗಳ 53 ಔಷಧಗಳು ಸರ್ಕಾರದ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದದದ್ದು ಆತಂಕ ಸೃಷ್ಟಿಸಿತ್ತು. ಇದಕ್ಕೂ ಮುನ್ನ ಆಗಸ್ಟ್​ನಲ್ಲಿ 156 ನಿಶ್ಚಿತ ಔಷಧ ಡೋಸ್ ಸಂಯೋಜನೆಗೆ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ನಿಷೇಧ ಹೇರಿತ್ತು ಎಂಬುದು ಗಮನಾರ್ಹ.

ಹರಿಯಾಣಾ, ಹಿಮಾಚಲಪ್ರದೇಶದಂತಹ ಉತ್ತರ ಭಾರತದ ಕೆಲ ರಾಜ್ಯಗಳಲ್ಲಂತೂ ಬೇಕಾದ ಔಷಧವನ್ನು ತಯಾರಿಸಿ ಕೊಡುವ ಕಾರ್ಖಾನೆಗಳೇ ತಲೆಯೆತ್ತಿವೆ ಎಂಬುದು ಆತಂಕದ ವಿಚಾರ. ಇಲ್ಲಿ ಯಾವುದೇ ಸುರಕ್ಷಾ ಮಾನದಂಡ ಅನುಸರಿಸುವುದಿಲ್ಲ, ಗುಣಮಟ್ಟ ಕಾಯ್ದುಕೊಳ್ಳುವುದಿಲ್ಲ. ಇದು ಒಂದು ದೊಡ್ಡ ದಂಧೆಯಾಗಿ ಬದಲಾಗಿದ್ದು, ಕೆಲವೆಡೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದು ಸ್ಥಳೀಯ ಜನರ ಆರೋಪ.

ಈ ಕಳಪೆ ಔಷಧಗಳಿಂದ ಜನರ ಆರೋಗ್ಯ ಹದಗೆಡುವುದಷ್ಟೇ ಅಲ್ಲ, ಔಷಧ ತಯಾರಿಕಾ ಉದ್ಯಮದ ಮೇಲೆ ಜನ ಇಟ್ಟಿರುವ ನಂಬಿಕೆಗೂ ಧಕ್ಕೆಯಾಗುತ್ತದೆ. ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವ ಕಂಪನಿಗಳ ವಿರುದ್ಧ, ಇದಕ್ಕೆ ಕೈಜೋಡಿಸಿರುವ ಶಕ್ತಿಗಳ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಬೇಕು ಮತ್ತು ಕಳಪೆ ಔಷಧಗಳ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ವಿಶೇಷ ಪ್ರಯತ್ನಗಳನ್ನು ಮಾಡಬೇಕು. ಕಳಪೆ ಔಷಧದ ಈ ಪಿಡುಗನ್ನು ಮಟ್ಟ ಹಾಕಲು ಸರ್ಕಾರ, ಔಷಧ ನಿಯಂತ್ರಣ ಸಂಸ್ಥೆಗಳು, ಔಷಧ ಮಾರಾಟ ಕಂಪನಿಗಳು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾಗಿದೆ.

ಮುಖ್ಯವಾಗಿ, ಔಷಧ ತಯಾರಿಕಾ ಕಂಪನಿಗಳು ತಾವು ತಯಾರಿಸುವ ಉತ್ಪನ್ನಗಳ ಗುಣಮಟ್ಟಕ್ಕೆ ಉತ್ತರದಾಯಿ ಆಗಿರಬೇಕು. ನಕಲಿ ಔಷಧಗಳನ್ನು ಪತ್ತೆಹಚ್ಚಲು ಮತ್ತು ಮಾರುಕಟ್ಟೆಯಿಂದ ಹಿಂಪಡೆಯಲು ನಿಯಂತ್ರಕ ಸಂಸ್ಥೆಗಳೊಂದಿಗೆ ನಿಕಟವಾಗಿ ಸಹಕರಿಸಬೇಕು. ನಕಲಿ ಔಷಧಗಳ ಈ ಸಮಸ್ಯೆಯನ್ನು ಪರಿಹರಿಸಲು ಸಾಮೂಹಿಕ ಪ್ರಯತ್ನ ಮತ್ತು ಇಚ್ಛಾಶಕ್ತಿ ಅಗತ್ಯ. ಈ ಬಹುಮುಖಿ ಸವಾಲಿನ ವಿರುದ್ಧ ನಿಯಂತ್ರಣ ಸಂಸ್ಥೆಗಳು, ಔಷಧ ಉದ್ಯಮ ಮತ್ತು ಸರ್ಕಾರ ಒಟ್ಟಾಗಿ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧಗಳು ಮಾರುಕಟ್ಟೆ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು, ಆ ಮೂಲಕ ಜನರ, ಸಮಾಜದ ಆರೋಗ್ಯವನ್ನು ರಕ್ಷಿಸುವುದು ಅಗತ್ಯವಾಗಿದೆ. ಈ ಪಿಡುಗು ಮುಂದುವರಿಯದಂತೆ, ಗುಣಮಟ್ಟದ ಔಷಧಗಳು ಮಾತ್ರ ಮಾರುಕಟ್ಟೆ ಪ್ರವೇಶಿಸುವಂತೆ ಮಾಡಲು ನಿಗಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net