ಹೈಟೆಕ್ ವೇಶ್ಯಾವಾಟಿಕೆ, 7 ಮಂದಿ ಅರಸ್ಟ್

Prostitution case
Published on

ಮಂಗಳೂರು: ವ್ಯವಸ್ಥಿತವಾಗಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಯುವತಿಯರನ್ನು ಬಳಸುತ್ತಿದ್ದ ಪ್ರಕರಣವನ್ನು ಮತ್ತಷ್ಟು ಜಾಲಾಡಿದ ಮಂಗಳೂರು ಪೊಲೀಸರು ಮತ್ತೆ 7 ಮಂದಿಯನ್ನು ಬಂಧಿಸಿದ್ದಾರೆ.

ಫೆ.2ರಂದು ಮೂವರು ಆರೋಪಿಗಳನ್ನು ಅಕ್ರಮ ಮಾನವ ಸಾಗಣೆ ತಡೆ ಕಾಯ್ದೆ (ಐಟಿಪಿ ಆಕ್ಟ್) ಹಾಗೂ ಪೋಕ್ಸೋ ಕಾಯ್ದೆಯನ್ವಯ ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮೂವರು ಗಿರಾಕಿಗಳು ಹಾಗೂ ವ್ಯವಸ್ಥಿತ ವೇಶ್ಯಾವಾಟಿಕೆ ದಂಧೆಗೆ ಸಹಕರಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಮೂಲಕ ಒಟ್ಟು ಬಂಧಿತರ ಸಂಖ್ಯೆ 10ಕ್ಕೇರಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಕರಣದ ವಿವರ ನೀಡಿದರು. ಮೂಡುಬಿದಿರೆಯ ಹೊಸಬೆಟ್ಟು ನಿವಾಸಿ ಬಿಲ್ಡಿಂಗ್ ಗುತ್ತಿಗೆದಾರ ಸಂದೀಪ್(33), ಕೈಕಂಬ ಮಂಗಳೂರಿನ ಬಿಲ್ಡಿಂಗ್ ಗುತ್ತಿಗೆದಾರ ಸಿಪ್ರಿಯಾನ್ ಅಂದ್ರಾದೆ(40), ಕಾಸರಗೋಡು ಜಿಲ್ಲೆಯ ಉದ್ಯಾವರ ಮಂಜೇಶ್ವರದ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ದುಬೈನಲ್ಲಿ ವಾಹನದ ಬಿಡಿಭಾಗಗಳ ಅಂಗಡಿ ಹೊಂದಿರುವ ಮಹಮ್ಮದ್ ಶರೀಫ್(46) ಬಂಧಿತ ಗಿರಾಕಿಗಳು. ಈ ಜಾಲದಲ್ಲಿ ಸಹಕರಿಸುತ್ತಿದ್ದ ಬಂಟ್ವಾಳದ ತಲಪಾಡಿಯ ರಹಮತ್(48), ಮಂಗಳೂರಿನ ಕಣ್ಣೂರಿನ ಮೆಹಂದಿ ಹಾಕುವ ಕೆಲಸದ ಸನಾ ಅಲಿಯಾಸ್ ಅಸ್ಮ(24), ಬಂಟ್ವಾಳ ನರಿಂಗಾನದ ಮಟನ್‌ಶಾಪ್‌ನ ಉಮ್ಮರ್ ಕುನ್ನಿ(43) ಹಾಗೂ ಬೆಂದೂರುವೆಲ್ ನಿವಾಸಿ ಮೀನು ಮಾರಾಟಗಾರ ಮಹಮ್ಮದ್ ಹನೀಫ್(46) ಎಂಬವರನ್ನೂ ಬಂಧಿಸಲಾಗಿದೆ.

ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಈ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಕೊಂಡಿರುವುದು ಆಕೆಯ ಕಾಲೇಜಿನ ಮುಖ್ಯಸ್ಥೆಗೆ ತಿಳಿದ ಬಳಿಕ ಈ ಪ್ರಕರಣ ಬಹಿರಂಗಗೊಂಡಿತ್ತು. ಆರೋಪಿಗಳು ಈಕೆಗೆ ಬೆದರಿಕೆ ಒಡ್ಡಿ ದಂಧೆಗೆ ಬಳಸಿಕೊಂಡಿದ್ದಾರೆ. ಆಕೆಯ ಮೇಲೆ 2-3 ತಿಂಗಳುಗಳಲ್ಲಿ ಆರು ಬಾರಿ ಲೈಂಗಿಕ ಹಲ್ಲೆ ನಡೆಸಲಾಗಿತ್ತು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಹುಡುಗಿಯರಿಗೆ ಬಲೆ ಬೀಸುತ್ತಿದ್ದ ಮಹಿಳೆಯರು!: ಮಹಿಳೆಯರು ತಮ್ಮ ಬಲೆಗೆ ಬೀಳುವಂತಹ ಹುಡುಗಿಯರನ್ನು ಹುಡುಕುತ್ತಿದ್ದರೆ ಇತರರು ಗಿರಾಕಿಗಳನ್ನು ಹುಡುಕುತ್ತಿದ್ದರು ಎಂದು ಶಶಿಕುಮಾರ್ ಹೇಳಿದರು. ಈ ಗ್ಯಾಂಗ್‌ನಲ್ಲಿ ಇನ್ನಷ್ಟು ಮಂದಿ ತೊಡಗಿಸಿಕೊಂಡಿರುವ ಮಾಹಿತಿ ಇದೆ, ಕಾಲ್ ರೆಕಾರ್ಡ್ಸ್, ಫೊಟೊ ಶೇರ್ ಮಾಡಿರುವ ವಿಚಾರ, ವಾಟ್ಸಾಪ್ ವಿವರಗಳಿವೆ. ಫೆ.2ರಂದು ವೇಶ್ಯಾವಾಟಿಕೆ ಜಾಲವನ್ನು ಭೇದಿಸಿ ಮಂಗಳೂರು ನಂದಿಗುಡ್ಡೆಯ ಮೂವರನ್ನು ಬಂಧಿಸಲಾಗಿತ್ತು, ಅವರಿಂದ ವಿಚಾರಣೆ ವೇಳೆ ಪಡೆದ ಮಾಹಿತಿ ಅನ್ವಯ ಈ ಬಂಧನ ನಡೆದಿದೆ ಎಂದರು.

ಮೊದಲು ಆಮಿಷ ನಂತರ ಬಲವಂತ: ಪ್ರತಿಷ್ಠಿತ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಈ ಗ್ಯಾಂಗ್‌ನ ಮಹಿಳೆ ಪರಿಚಯಿಸಿಕೊಂಡು, ಬಳಿಕ ಗೆಳೆತನ ಬೆಳೆಸಿಕೊಂಡಳು. ಗ್ಯಾಂಗಿನ ಇತರರಿಗೆ ಪರಿಚಯಿಸಿ, ಬೇಕಾದರೆ ಹಣದ ನೆರವು ಕೊಡುತ್ತೇವೆ ಎಂದು ಆಮಿಷ ಒಡ್ಡಿದಳು. ನಂದಿಗುಡ್ಡೆಯ ಪೆಂಟ್ ಹೌಸ್‌ಗೆ ಕರೆಸಿಕೊಂಡು, ಆಮಿಷವೊಡ್ಡಿ ಆಕೆಯ ಮನಸ್ಸು ಪರಿವರ್ತಿಸಲು ಗ್ಯಾಂಗ್ ಯತ್ನಿಸಿದೆ. ಗಿರಾಕಿಯೊಬ್ಬನ ಜತೆ ಹೋಗುವಂತೆ ಸೂಚಿಸಿದಾಗ ಬಾಲಕಿ ನಿರಾಕರಿಸಿದಳು. ಆ ವೇಳೆ ‘ಗಿರಾಕಿ ಜತೆ ನೀನಿರುವ ಸಿಸಿಟಿವಿ ಫೂಟೇಜ್ ಇದೆ, ಇದನ್ನು ಕಾಲೇಜಿನ ಗ್ರೂಪಿಗೆ, ಫೇಸ್‌ಬುಕ್‌ಗೆ ಹಾಕಿ ಮಾನಹಾನಿ ಮಾಡುತ್ತೇವೆ, ಬದುಕಲು ಬಿಡುವುದಿಲ್ಲ’ ಎಂದು ಬೆದರಿಕೆ ಒಡ್ಡಿದ್ದಾರೆ. ನಾವು ಹೇಳಿದ ಹಾಗೆ ಮಾಡು, ಒಂದೆರಡು ವರ್ಷ ನಮ್ಮ ಸಂಪರ್ಕಲ್ಲಿದ್ದರೆ ಸಾಕು’ ಎಂದು ಹೇಳಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿರುವುದು ಬಹಿರಂಗಗೊಂಡಿದೆ. ಆರು ಬಾರಿ ಲೈಂಗಿಕ ಹಲ್ಲೆಗೊಳಗಾದ ಸಂತ್ರಸ್ತೆಯನ್ನು ಕೌನ್ಸೆಲಿಂಗ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

.

ಬಾಲಕಿ ಮೇಲೆ ಕೃತ್ಯ ಎಸಗಿರುವ ಪ್ರಕರಣದಲ್ಲಿ ಪೋಕ್ಸೋ ಹಾಗೂ ಐಟಿಪಿ ಕಾಯ್ದೆಯನ್ವಯ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೆ ಹೆಚ್ಚುವರಿಯಾಗಿ ನಾಲ್ಕು ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಮೂವರು ಗಿರಾಕಿಗಳನ್ನೂ ಬಂಧಿಸಲಾಗಿದೆ. ಶಶಿಕುಮಾರ್ ಮಂಗಳೂರು ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net