ಕೈಗಾರಿಕೆ ಆರಂಭಕ್ಕೆ ಪರ-ವಿರೋಧ

klr kidb
ಸಭೆಯಲ್ಲಿ ಕೆಐಡಿಬಿ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸುತ್ತಿರುವ ರೈತರು.
Published on

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮ ಸಮೀಪ ಕೈಗಾರಿಕೆಗಳಿಗೆ ಜಮೀನು ಗುರುತಿಸಿರುವ ಕುರಿತು ಕೆಐಎಡಿಬಿ ಅಧಿಕಾರಿಗಳು ಸೋಮವಾರ ರೈತರಿಂದ ಆಕ್ಷೇಪಣೆ ಸ್ವೀಕರಿಸಿದರು.

ಗ್ರಾಮದ ಸಮೀಪ 1723 ಎಕರೆ ಜಮೀನನ್ನು ಕೈಗಾರಿಕೆಗಳಿಗೆ ಗುರುತಿಸಿದ್ದು, ಆ ಪೈಕಿ 551 ಮಂದಿ ಖÁತೆದಾರರಿದ್ದಾರೆ. ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕೆ, ಬೇಡವೇ? ಎಂಬದರ ಬಗ್ಗೆ ರೈತರಿಂದ ಆಕ್ಷೇಪ ಸ್ವೀಕರಿಸಲು ನೋಟಿಸ್ ನೀಡಲಾಗಿತ್ತು. ಆದರಂತೆ ಕೆಐಎಡಿಬಿ ಇಲಾಖೆಯ ವಿಶೇಷ ಭೂ ಭೂಸ್ವಾಧೀನಾಧಿಕಾರಿ ವೆಂಕಟಲಕ್ಷ್ಮೀ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಕೆಲವರು ಕೈಗಾರಿಕೆ ಸ್ಥಾಪನೆ ಮಾಡುವುದು ಬೇಡ ಎಂದು ಒತ್ತಾಯಿಸಿದರು. ಈ ವೇಳೆ ಗ್ರಾಮಸ್ಥರಲ್ಲದವರು ಕೈಗಾರಿಕೆ ಬೇಡ ಎನ್ನುತ್ತಿದ್ದಾರೆ ಎಂದು ಆಕ್ಷೇಪಿಸಿದ ಗ್ರಾಮದ ಖಾತೆದಾರರು, ಗ್ರಾಮಸ್ಥರ ಅಭಿಪ್ರಾಯ ಪಡೆದು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮಧ್ಯ ಪ್ರವೇಶಿಸಿದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಸರ್ಕಾರವು ಕೈಗಾರಿಕೆಗಳಿಗೆ ಸೂಕ್ತ ಜಾಗ ಗುರುತಿಸಿದೆ. ತಕರಾರು ಇದ್ದರೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಹೇಳಿದರು.

ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟಲಕ್ಷ್ಮೀ ಅವರು ಕ್ರಮ ಸಂಖ್ಯೆಯಂತೆ ರೈತರನ್ನು ಕರೆದು ಆಕ್ಷೇಪ ಸಂಗ್ರಹಿಸಲು ಮುಂದಾದರು. ಈ ವೇಳೆ ಸಿಪಿಎಂ ಮುಖಂಡ ಸೂರ್ಯ ನಾರ್ಯನಾರಾಯಣ, ಕಾಂಗ್ರೆಸ್ ಮುಖಂಡರಾದ ಕೆ.ಕೆ.ಮಂಜುನಾಥ್, ಬ್ಯಾಟಪ್ಪ, ನವೀನ್ ಕುಮಾರ್ ಜತೆಗೆ ಕೆಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಬಹುತೇಕ ಮಂದಿಗೆ ನೋಟಿಸ್ ಕೈ ಸೇರಿಲ್ಲ. 10 ದಿನ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ವೆಂಕಟಲಕ್ಷ್ಮೀ, ಈ ಭಾಗದಲ್ಲಿ ಕೈಗಾರಿಕೆಗಳಿಗೆ ಜಾಗ ಗುರುತು ಮಾಡಲಾಗಿದ್ದು, ಆದರೆ ಇನ್ನೂ ನೋಟಿಫಿಕೇಷನ್ ಆಗಿಲ್ಲ. ಈಗಾಗಲೇ ನೋಟಿಸ್ ನೀಡಿರುವ ರೈತರಿಂದ ಆಕ್ಷೇಪಣೆ ಸ್ವೀಕರಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಯಾರಿಗೆ ನೋಟಿಸ್ ಸಿಕ್ಕಿಲ್ಲವೊ ಅವರಿಂದ 10 ದಿನಗಳ ನಂತರ ಆಕ್ಷೇಪಣೆ ಸ್ವೀಕರಿಸಲಾಗುವುದು ಎಂದರು.

* ಮುಂದಾಲೋಚನೆಯಿಂದ ಕ್ರಮ

ಆಕ್ಷೇಪಣೆ ಸ್ವೀಕರಿಸುವ ಸಭೆಗೂ ಮುನ್ನ ನಡೆದ ಸಭೆಯಲ್ಲಿ ರೈತರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಕೈಗಾರಿಕೆಗಳ ಸ್ಥಾಪನೆಯಿಂದ ಸ್ಥಳೀಯ ಅಭಿವೃದ್ಧಿ ಜತೆಗೆ, ನಿರುದ್ಯೋಗಿ ಯುವಕರಿಗೆ ಕೆಲಸ ದೊರೆಯುತ್ತದೆ. ಮುಂದಾಲೋಚನೆ ಇಟ್ಟುಕೊಂಡು ಕೈಗಾರಿಕೆಗಳು ಸ್ಥಾಪನೆ ಆಗುತ್ತವೆ, ಅಭಿಪ್ರಾಯ ತಿಳಿಸಿ ಭೂಮಿ, ಬೆಳೆಗಳಿಗೆ ಪರಿಹಾರ ನೀಡುತ್ತಾರೆ, ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

* ಗ್ರಾಮಸ್ಥರಲ್ಲದವರಿಂದ ಅಡ್ಡಿಗೆ ಯತ್ನ

ಅಧಿಕಾರಿಗಳು ರೈತರಿಂದ ಆಕ್ಷೇಪಣೆ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಹೊರಗಿನ ಕೆಲವರು ವಿನಾಕಾರಣ ಅಡ್ಡಿಪಡಿಸಲು ಯತ್ನಿಸಿ, ಚೇರು, ಟೇಬಲನ್ನು ಎಳೆದಾಡಿದರು. ಇದಕ್ಕೆ ಗರಂ ಆದ ಯದರೂರು ಗ್ರಾಮದ ಕೆಲವರು, ನಮ್ಮೂರಿನ ಸಮಸ್ಯೆಯಿದು, ನಾವು ಬಗೆಹರಿಸಿಕೊಳ್ಳುತ್ತೆವೆ. ಹೊರಗಿನವರಿಗೇನು ಇಲ್ಲಿ ಕೆಲಸ, ನಮಗೆ ಕೈಗಾರಿಕೆಗಳು ಬೇಕು ಎಂದರು. ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಹತೋಟಿಗೆ ತಂದರು. ಪ್ರತಿಭಟಿಸುತ್ತಿದ್ದ 4-5 ಮಂದಿಯನ್ನು ಕೆಐಡಿಬಿ ಅಧಿಕಾರಿ ವೆಂಕಟಲಕ್ವೆಂಷ್ಕಮೀ ಮನವೊಲಿಸಿದರು.

ಬಾಕ್ಸ್...

* ಹೊರಗಿನವರ ಒತ್ತಡಕ್ಕೆ ಮಣಿಯಬೇಡಿ

ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾವಂತ ಯುವಕರಿದ್ದಾರೆ. ಕೆಲಸಗಳಿಗಾಗಿ ಬೇರೆ ಊರುಗಳಿಗೆ ಹೋಗುವ ಪರಿಸ್ಥಿತಿಯಲ್ಲಿಲ್ಲ. ಕೆಲವರು ಬೇಕಾಗಿಯೇ ಕೈಗಾರಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಅವರ ಒತ್ತಡಕ್ಕೆ ಮಣಿದು ಕ್ರಮಕೈಗೊಳ್ಳಬಾರದು. ನಮ್ಮ ಅಭಿಪ್ರಾಯ ಪಡೆದು ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂದು ಯದರೂರು ಯುವಕ ಮನೋಹರ್ ಒತ್ತಾಯಿಸಿದರು.

* ವ್ಯವಸಾಯದಷ್ಟೆ, ಕೈಗಾರಿಕೆಗಳು ಮುಖ್ಯ

ಕೆಐಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟಲಕ್ಷ್ಮೀ ಮಾತನಾಡಿ, ಸಮುದಾಯಕ್ಕೆ ವ್ಯವಸಾಯ ಎಷ್ಟು ಮುಖ್ಯವೋ, ಕೈಗಾರಿಕೆಗಳು ಸಹ ಅಷ್ಟೇ ಮುಖ್ಯ. ಈ ಭಾಗದ ಶಾಸಕರು ಕೈಗಾರಿಕೆಗಳ ವಿಚಾರದಲ್ಲಿ ಬಹಳಷ್ಟು ಅಸಕ್ತಿ ತೋರಿದ್ದು, ಪ್ರತಿ ಹಂತದಲ್ಲೂ ಒತ್ತಡ ಹೇರುತ್ತಿದ್ದಾರೆ. ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗಿದ್ದು, ಅಭಿಪ್ರಾಯ ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಶ್ರೀನಿವಾಸಪುರಕ್ಕೆ ಹಿಂದೆಯೂ, ಈಗಲೂ ಒಳ್ಳೆಯ ಹೆಸರಿದೆ, ಮತ್ತಷ್ಟು ಅಭಿವೃದ್ಧಿಗಾಗಿ ನಾಗರಿಕರು ಸಹಕಾರ ನೀಡಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net