

ವಿಜಯಪುರ: ಹೋಬಳಿಯ ಹಾರೋಹಳ್ಳಿಯಲ್ಲಿ ಸೋಮವಾರ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿಗೆ ಚಾಲನೆ ನೀಡಲು ಮುಂದಾದ ಶಾಸಕ ನಿಸರ್ಗ ನಾರಾಯಣಸ್ವಾಮಿ ನಡೆ ವಿರೋಧಿಸಿದ ಗ್ರಾಮಸ್ಥರು, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.
ಹಾರೋಹಳ್ಳಿಯಲ್ಲಿ ಈಗಾಗಲೇ ಗ್ರಾಪಂನಿಂದ ಎಲ್ಲ ಕಡೆ ಪೈಪ್‌ಲೈನ್ ಮಾಡಲಾಗಿದೆ. ಆದರೆ ಕುಡಿಯುವ ನೀರಿನ ಕೊರತೆ ಇರುವುದರಿಂದ, ಖಾಸಗಿ ಕೊಳವೆ ಬಾವಿ ನೆರವಿನಿಂದ ಪೈಪ್‌ಲೈನ್ ಮೂಲಕವೇ ನೀರು ಪೂರೈಸಲಾಗುತ್ತಿದೆ.
ನೀರಿನ ಸಮಸ್ಯೆ ನೀಗಿಸಲು ಸರ್ಕಾರದಿಂದ ಕೊಳವೆಬಾವಿ ಕೊರೆಸಲು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಯಾರೊಬ್ಬರೂ ಸ್ಪಂದಿಸಲಿಲ್ಲ. ಈಗ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಮಾಡಿದರೂ ನೀರಿನ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. ಆದ್ದರಿಂದ ಮೊದಲು ಕೊಳವೆಬಾವಿ ಕೊರೆಯಿಸಿಕೊಟ್ಟ ಬಳಿಕ ಯೋಜನೆಗೆ ಚಾಲನೆ ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮಾತಿನ ಚಕಮಕಿ: ಯೋಜನೆಯ ಅನುಷ್ಠಾನಕ್ಕೆ ಶಿಷ್ಟಾಚಾರದಂತೆ ವಿಧಾನಪರಿಷತ್ ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಬರಬೇಕು. ಆದರೆ ಪಕ್ಷದ ಮುಖಂಡರೊಂದಿಗೆ ಚಾಲನೆ ನೀಡುವುದು ಸರಿಯಲ್ಲ. ಇದು ಜೆಡಿಎಸ್ ಕಾರ್ಯಕ್ರಮವೇ ಎಂದು ಸ್ಥಳೀಯರು ಪ್ರಶ್ನಿಸಿದರು. ಈ ವೇಳೆ ಶಾಸಕರ ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ಮಾತಿನಚಕಮಕಿ ನಡೆಯಿತು. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಬಳಿಕ ಯೋಜನೆಯ ಅನುಷ್ಠಾನಕ್ಕೆ ಚಾಲನೆ ನೀಡಲಾಯಿತು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಗ್ರಾಮಕ್ಕೂ ತಾರತಮ್ಯ ಮಾಡಿಲ್ಲ. ಈ ಮೊದಲು ಜಲಜೀವನ್ ಮಿಷನ್‌ನಿಂದ ಕೊಳವೆಬಾವಿ ಕೊರೆಯಿಸಿದ್ದು ವಿಫಲವಾಗಿದೆ. ಶಾಸಕರ ಅನುದಾನದಲ್ಲಿ ಪುನಃ ಕೊಳವೆಬಾವಿ ಕೊರೆಸಲು ಜಿಪಂ ಎಇಇ ಅವರೊಂದಿಗೆ ಮಾತನಾಡಿದ್ದೇನೆ. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ಸಹಕರಿಸಿ ಎಂದರು.
ಗ್ರಾಪಂನಿಂದ ಕೈಗೊಂಡ ಪೈಪ್‌ಲೈನ್ ಕಾಮಗಾರಿ ಅಪೂರ್ಣಗೊಂಡಿದ್ದು, ಈ ಕಾಮಗಾರಿಯನ್ನು ಜಲಜೀವನ್ ಮಿಷನ್ ಯೋಜನೆಯಡಿ ಪೂರ್ಣಗೊಳಿಸಿ. ಪಂಚಾಯಿತಿ ಹಣವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವಂತೆ ತಿಳಿಸಿದ್ದರೂ ಪಂಚಾಯಿಂದ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ ಎಂದು ಗ್ರಾಪಂ ಸದಸ್ಯರಾದ ಮುನಿರಾಜು, ಮಾಲಾ, ವರಲಕ್ಷ್ಮಮ್ಮ ದೂರಿದರು.
ಗ್ರಾಪಂ ಅಧ್ಯಕ್ಷೆ ವಸಂತಮ್ಮ, ಉಪಾಧ್ಯಕ್ಷ ಸೊಣ್ಣೇಗೌಡ, ಪಿಡಿಒ ಸೌಮ್ಯಶ್ರೀ, ಸದಸ್ಯ ಸುಬ್ರಮಣಿ, ಪೊಲೀಸ್ ಇನ್‌ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ಇದ್ದರು.