

ನವದೆಹಲಿ: ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವಿಚಾರದಲ್ಲಿ ಪ್ರಾತಿನಿಧಿತ್ವ ನಿರ್ಧರಿಸುವುದಕ್ಕೆ ನ್ಯಾಯಪೀಠಗಳು ಮಾನದಂಡ ರೂಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಇದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದೆ. 2006ರಲ್ಲಿ ಎಂ. ನಾಗರಾಜು ವರ್ಸಸ್ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕೆಲವು ಸ್ಪಷ್ಟೀಕರಣಗಳನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಮೇಲೆ ಆದೇಶ ಪ್ರಕಟಿಸಿರುವ ಎಲ್. ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠ, ನಾಗರಾಜು ತೀರ್ಪಿನ ಅನ್ವಯ ಎಸ್ಸಿ/ಎಸ್ಟಿ ಪ್ರಾತಿನಿಧ್ಯದ ಕುರಿತು ಅಗತ್ಯ ದತ್ತಾಂಶಗಳನ್ನು ಸಂಗ್ರಹಿಸಿ ತೀರ್ಮಾನ ಕೈಗೊಳ್ಳುವುದು ಸರ್ಕಾರಗಳ ಕೆಲಸವಾಗಿದೆ. ಇದರಲ್ಲಿ ನಮ್ಮ ಪಾತ್ರ ಬರುವುದಿಲ್ಲ. ಪ್ರಾತಿನಿಧಿತ್ವದ ಅಸಮರ್ಪಕತೆ ಸರಿಪಡಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ವಿವೇಚನೆಯನ್ನು ಸರ್ಕಾರಕ್ಕೆ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಸಮರ್ಥನೀಯವಲ್ಲ: ದತ್ತಾಂಶ ಸಂಗ್ರಹಿಸುವ ವಿಚಾರದಲ್ಲಿ ಕರ್ನಾಟಕದ ಬಿ.ಕೆ. ಪವಿತ್ರಾ ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದ ತೀರ್ಪು ಹಾಗೂ 2006ರ ಎಂ ನಾಗರಾಜ್ ತೀರ್ಪಗಳಲ್ಲಿ ವ್ಯತಿರಿಕ್ತತೆ ಇದೆ ಎಂದೂ ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ಪೀಠವು 2019ರಲ್ಲಿ ಬಿ.ಕೆ ಪವಿತ್ರಾ (2ನೇ ತೀರ್ಪ) ತೀರ್ಪಿನಲ್ಲಿ 2006ರ ಎಂ.ನಾಗರಾಜ್ ಪ್ರಕರಣದಲ್ಲಿ ಹಾಕಿಕೊಟ್ಟ ಮಾರ್ಗಸೂಚಿಗಳನ್ನು ಬದಿಗೆ ಸರಿಸಿದ್ದು ಸಮರ್ಥನೀಯ ಕ್ರಮವಲ್ಲ ಎಂದೂ ನ್ಯಾ. ನಾಗೇಶ್ವರ ರಾವ್ ನೇತೃತ್ವದ ಪೀಠ ಹೇಳಿದೆ. ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿಗಾಗಿ ಪ್ರಮಾಣೀಕರಿಸಬಹುದಾದ ದತ್ತಾಂಶವನ್ನು ಸಂಗ್ರಹಿಸಲು ಕೇಡರ್ ಅನ್ನು (ಶ್ರೇಣಿ) ಮಾನದಂಡವಾಗಿ ಪರಿಗಣಿಸದಿರುವುದು ಅರ್ಥಹೀನ ಎಂದು ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?: ಎಸ್ಸಿ/ಎಸ್ಟಿ ಸಮುದಾಯದ ನೌಕರರಿಗೆ ಬಡ್ತಿ ವೇಳೆಯೂ ಮೀಸಲಾತಿ ಕಲ್ಪಿಸಬೇಕು ಎಂದು 2006ರ ಎಂ. ನಾಗರಾಜು ತೀರ್ಪಿನಲ್ಲಿ ತಿಳಿಸಲಾಗಿತ್ತು. ಆದರೆ, ಈ ಮೀಸಲಾತಿ ನೀಡುವ ಮುನ್ನ ಕೆಲವು ಷರತ್ತುಗಳನ್ನು ಪಾಲಿಸಬೇಕು ಎಂದೂ ಮಾರ್ಗಸೂಚಿಗಳನ್ನು ಹಾಕಿಕೊಡಲಾಗಿತ್ತು. ಮೀಸಲಾತಿ ಪಡೆಯುವ ನೌಕರರ ಹಿಂದುಳಿದಿರುವಿಕೆಯನ್ನು ದೃಢಪಡಿಸುವುದು, ಎಸ್ಸಿ/ಎಸ್ಟಿ ಸಮುದಾಯಗಳ ಪ್ರಾತಿನಿಧ್ಯದ ಕೊರತೆಗೆ ಸಾಕ್ಷ್ಯ ಒದಗಿಸುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಸಂವಿಧಾನದ 335ನೇ ವಿಧಿ ಹೇಳುವಂತೆ, ಆಡಳಿತದಲ್ಲಿನ ದಕ್ಷತೆ ಹಾಗೂ ಸಶಕ್ತ ನಿರ್ವಹಣೆಯನ್ನು ಪರಿಗಣಿಸಿ ಮೀಸಲಾತಿ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿತ್ತು. ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ಗೆೆ ಹಲವು ಅರ್ಜಿಗಳು ಸಲ್ಲಿಕೆಯಾದರೂ, ತೀರ್ಪನ್ನು ಸುಪ್ರೀಂಕೋರ್ಟ್ನ 7 ಸದಸ್ಯರ ಪೀಠ ಮರುಪರಿಶೀಲನೆ ನಡೆಸುವ ಅಗತ್ಯವಿಲ್ಲ. ನಾಗರಾಜು ತೀರ್ಪನ್ನು ನಾವು ಎತ್ತಿಹಿಡಿಯುತ್ತೇವೆ ಎಂದು 2018ರಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.
ಇದಾದ ಬಳಿಕ ಕೆಲ ರಾಜ್ಯಗಳು ಬಡ್ತಿ ಮೀಸಲಾತಿ (ಷರತ್ತುಗಳನ್ನು ಒಳಗೊಂಡು) ಅನುಸರಣೆಗೆ ಮುಂದಾದವು. ಆದರೆ, ಕೆಲ ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರಿ, ಬಡ್ತಿ ಮೀಸಲಾತಿಯಲ್ಲಿ ನಾಗರಾಜು ತೀರ್ಪಿನ ಅಂಶಗಳ ಪಾಲನೆಯಾಗಿಲ್ಲ ಎಂಬ ತೀರ್ಪಗಳು ಬಂದವು. ಹೀಗಾಗಿ, ಪ್ರಕರಣ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ನಾಗರಾಜು ತೀರ್ಪಿನ ಮರು ಪರಿಶೀಲನೆ ಸಾಧ್ಯವಿಲ್ಲ. ಆದರೆ, ನಾಗರಾಜು ತೀರ್ಪಿನಲ್ಲಿದ್ದ ಷರತ್ತುಗಳ ಬಗ್ಗೆ ಸ್ಪಷ್ಟೀಕರಣ ನೀಡುತ್ತೇವೆ ಎಂದ ಸುಪ್ರೀಂಕೋರ್ಟ್, ಈ ಅರ್ಜಿಗಳ ವಿಚಾರಣೆಗೆ ಅಂಗೀಕರಿಸಿತ್ತು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಎಸ್ಸಿ/ಎಸ್ಟಿಗೆ ಸೇರಿದವರನ್ನು ಮುಂದುವರಿದ ವರ್ಗಗಳ ಮಟ್ಟಕ್ಕೆ ತಲುಪಿಸಲು ಸಾಧ್ಯವಾಗಿಲ್ಲ ಎನ್ನುವುದು ಕಟು ವಾಸ್ತವ ಎಂದು ಕೇಂದ್ರ ಸರ್ಕಾರದ ವಕೀಲರು ಪೀಠಕ್ಕೆ ತಿಳಿಸಿದ್ದರು.
ಫೆ.24ಕ್ಕೆ ವಿಚಾರಣೆ: ಬಡ್ತಿ ಮೀಸಲಾತಿ ಕುರಿತ ವೈಯಕ್ತಿಕ ಪ್ರಕರಣಗಳ ಅರ್ಹತೆಯ ಬಗ್ಗೆ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಎಲ್ಲ ಕಕ್ಷಿದಾರರನ್ನು ಆಲಿಸಿ, ನಮ್ಮ ಮುಂದಿರುವ ಸಾಮಾನ್ಯ ಸಮಸ್ಯೆಗಳಿಗೆ ಉತ್ತರಿಸಿದ್ದೇವೆ. ಫೆ.24ರಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮನವಿಗಳ ಕುರಿತ ವಿಚಾರಣೆ ನಡೆಸುತ್ತೇವೆ. ಬಡ್ತಿ ಮೀಸಲಾತಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಅದೇ ದಿನದಂದು ಕೈಗೆತ್ತಿಕೊಳ್ಳುತ್ತೇವೆ ಎಂದು ನ್ಯಾಯಪೀಠ ಮಾಹಿತಿ ನೀಡಿದೆ.
ಕೋರ್ಟ್ ಹೇಳಿದ್ದು...
ನೌಕರರ ‘ಕೇಡರ್ ಅನ್ನು ಪರಿ ಮಾಣಾತ್ಮಕ ದತ್ತಾಂಶ ಸಂಗ್ರಹಿಸುವ ಅಳತೆಗೋಲಾಗಿ ಪರಿಗಣಿಸಬೇಕೇ ವಿನಃ ಸಂಪೂರ್ಣ ಸೇವೆಯಲ್ಲ. ಕಾಲಕಾಲಕ್ಕೆ ಪ್ರಾತಿನಿಧಿತ್ವದ ಅಸಮರ್ಪಕತೆ ಬಗ್ಗೆ ಮರು ಪರಿಶೀಲಿಸುವ ಜತೆಗೆ ಪ್ರಾತಿನಿಧಿತ್ವದ ಬಗ್ಗೆ ಪ್ರಮಾಣೀಕರಿಸಬಹುದಾದ ದತ್ತಾಂಶ ಸಂಗ್ರಹವೂ ಅತ್ಯಗತ್ಯ’.
ಎಂ. ನಾಗರಾಜ್ ಪ್ರಕರಣದ ತೀರ್ಪು ಪೂರ್ವಾನ್ವಯವಲ್ಲ. 2006ರ ಹಿಂದಿನ ಕೇಸುಗಳಿಗೆ ಅದು ಅನ್ವಯಿಸಲ್ಲ. ತೀರ್ಪು ಹೊರಬಿದ್ದಂದಿನಿಂದ ಅನ್ವಯವಾಗಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಎಸ್ಸಿ/ಎಸ್ಟಿ ಪ್ರಾತಿನಿಧಿತ್ವದ ಕೊರತೆ ತುಂಬುವುದು ಕೇಡರ್/ಶ್ರೇಣಿ/ವಿಭಾಗ ಆಧರಿತವಿರಬೇಕೆ ಹೊರತು ಗುಂಪಾಗಿ ಅಲ್ಲ ಎಂದೂ ತಿಳಿಸಲಾಗಿದೆ. ಅಂದರೆ, ಪ್ರಾತಿನಿಧಿತ್ವ ಕೊರತೆ ಇದ್ದ ಸ್ಥಳಗಳಲ್ಲಿ ಮಾತ್ರ ಬಡ್ತಿ ಮೀಸಲು ಅನುಸರಿಸಬೇಕು ಎಂದರ್ಥ. ಬಿಕೆ ಪವಿತ್ರಾ (2ನೇ ತೀರ್ಪ) ತೀರ್ಪಿನಲ್ಲಿ ಬಡ್ತಿ ಮೀಸಲಿಗೆ ಸಂಬಂಧಿಸಿ ಹಿಂದಿನ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ್ದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ಕಾಯ್ದೆಯನ್ನು ಸುಪ್ರೀಂ ಒಪ್ಪಿಕೊಂಡಿತ್ತು. ಆದರೆ, ಶುಕ್ರವಾರದ ಸ್ಪಷ್ಟೀಕರಣ ತೀರ್ಪಿನಲ್ಲಿ ನಾಗರಾಜು ತೀರ್ಪನ್ನು ಮತ್ತೊಮ್ಮೆ ಎತ್ತಿಹಿಡಿಯುವ ಜತೆಗೆ ಬಿ.ಕೆ. ಪವಿತ್ರಾ ತೀರ್ಪು ನಾಗರಾಜು ಮತ್ತು ಜರ್ನೆಲ್ ಸಿಂಗ್ ಪ್ರಕರಣದ ಆಧಾರದಲ್ಲಿ ರೂಪಿಸಿರುವ ಕಾನೂನಿಗೆ ವಿರುದ್ಧವಾಗಿದೆ’ ಎಂಬುದಾಗಿಯೂ ಸ್ಪಷ್ಟ ವಾಕ್ಯಗಳಲ್ಲಿ ನ್ಯಾಯಪೀಠ ತಿಳಿಸಿದೆ. ಹೀಗಾಗಿ, ಕರ್ನಾಟಕ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆದುಕೊಳ್ಳುವುದು ಅನಿವಾರ್ಯ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಲು ಯತ್ನಿಸುತ್ತೇವೆ. ಇಲ್ಲವಾದಲ್ಲಿ ಕಾನೂನು ಹೋರಾಟದ ಮಾರ್ಗ ಇದ್ದೇ ಇದೆ’
| ಎಂ. ನಾಗರಾಜು ಅಧ್ಯಕ್ಷರು, ಅಹಿಂಸಾ ಸಂಘಟನೆ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗ)