ಶಿವಮೊಗ್ಗ ನಗರಕ್ಕೆ ನಿಷೇಧಾಜ್ಞೆ ವಿಸ್ತರಣೆ

police security in raagigudda
ರಾಗಿಗುಡ್ಡದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.
Published on

ಶಿವಮೊಗ್ಗ: ನಗರದ ಹೊರವಲಯದ ರಾಗಿಗುಡ್ಡದಲ್ಲಿ ಭಾನುವಾರ ಸಂಜೆ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟದ ಬಳಿಕ ಜಾರಿಯಾಗಿದ್ದ 144 ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಶಿವಮೊಗ್ಗ ನಗರಕ್ಕೆ ವಿಸ್ತರಿಸಿದೆ. ಕೃತ್ಯದ ಬಳಿಕ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಇದರ ಬೆನ್ನಲ್ಲೇ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮೆಗ್ಗಾನ್ ಆಸ್ಪತ್ರೆ ಮತ್ತು ರಾಗಿಗುಡ್ಡಕ್ಕೆ ತೆರಳಿ ಗಾಯಾಳುಗಳು ಹಾಗೂ ಸ್ಥಳೀಯರಿಗೆ ಧೈರ್ಯ ತುಂಬಿದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ದಾವಣಗೆರೆ ಪೂರ್ವ ವಲಯ ಐಜಿಪಿ ಕೆ.ತ್ಯಾಗರಾಜನ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಮೊಕ್ಕಂ ಹೂಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ವೇಳೆ ಚಾನೆಲ್ ಬಳಿ ಅಳವಡಿಸಿದ್ದ ಟಿಪ್ಪುವಿನ ಫ್ಲೆಕ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಕಲ್ಲು ತೂರಾಟ ನಡೆದಿದೆ. ಪೊಲೀಸರ ಮೇಲೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು. ರಾಗುಗುಡ್ಡದಲ್ಲಿ ಭಾನುವಾರ ರಾತ್ರಿಯೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ರಾಗಿಗುಡ್ಡ ವ್ಯಾಪ್ತಿಯಲ್ಲಿ 144 ಸೆಕ್ಷನ್ ಕೂಡ ಜಾರಿಗೊಳಿಸಲಾಗಿತ್ತು. ಆನಂತರ ಮುಂಜಾಗ್ರತಾ ಕ್ರಮವಾಗಿ ಮುಂದಿನ ಆದೇಶದವರೆಗೆ ಇಡಿ ನಗರದಾದ್ಯಂತ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net