ಎಸ್‌ಡಿಎಂಸಿಯಲ್ಲಿ ಜನಪ್ರತಿನಿಧಿಗಳ ನೇಮಕ ಕಡ್ಡಾಯ

HUN-JAN-12-1(TP KDP MEETING(
Published on

ಹುಣಸೂರು: ಸರ್ಕಾರಿ ಶಾಲೆಗಳ ಶಾಲಾ ಅಭಿವೃದ್ಧಿ ಮಂಡಳಿ(ಎಸ್‌ಡಿಎಂಸಿ)ಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಕಡ್ಡಾಯವಾಗಿ ನೇಮಿಸಿಕೊಳ್ಳಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ಸೂಚಿಸಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ತಾ.ಪಂ. ಆಡಳಿತಾಧಿಕಾರಿ ಸಿದ್ದಗಂಗಮ್ಮ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗೆ ಸೂಚಿಸಿದ ಅವರು, ತಾವು ಸಾಕಷ್ಟು ಶಾಲೆಗಳಿಗೆ ಭೇಟಿ ನೀಡಿದ್ದ ವೇಳೆ ಆ ವ್ಯಾಪ್ತಿಯ ಜನಪ್ರತಿನಿಧಿಗಳನ್ನು ಸಮಿತಿ ಸದಸ್ಯರಾಗಿ ನೇಮಿಸಿಕೊಂಡಿಲ್ಲವೆಂಬ ಮಾಹಿತಿ ತಿಳಿಯಿತು. ಸ್ಥಳೀಯವಾಗಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಬಹುದೊಡ್ಡದಾಗಿರುತ್ತದೆ. ಎಸ್‌ಡಿಎಂಸಿ ನೀತಿ ನಿಯಮಾವಳಿಗಳ ಪ್ರಕಾರ ಜನಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಿಕೊಳ್ಳಲು ಅವಕಾಶವಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆ ಗಮನಹರಿಸಿ ಕ್ರಮ ವಹಿಸಬೇಕೆಂದು ಸೂಚಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿ ಕಾರ್ಯನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳನ್ನು ನಾಮನಿರ್ದೇಶಿತ ಸದಸ್ಯರನ್ನಾಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.

ತಾಲೂಕಿನ 393 ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಒಟ್ಟು 40,711 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2023-24ನೇ ಸಾಲಿಗಾಗಿ 8 ಶಾಲೆಗಳಲ್ಲಿ ಶೌಚಗೃಹ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಸಾಲಿನಿಂದ ರಾಜ್ಯ ಸರ್ಕಾರ ನಿರ್ದೇಶಿಸಿರುವಂತೆ ಮೌಲ್ಯಾಂಕ ಪರೀಕ್ಷೆಗಳನ್ನು ಆಯೋಜಿಸಲು ಕ್ರಮವಹಿಸಲಾಗಿದೆ. ಮೌಲ್ಯಾಂಕ ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಇಒ ಬಿ.ಕೆ.ಮನು, ತಾ.ಪಂ. ಯೋಜನಾಧಿಕಾರಿ ರಾಜೇಶ್ ಮತ್ತು ಅಧಿಕಾರಿಗಳು ಹಾಜರಿದ್ದರು.

ಪಿಎಂ ಜನ್‌ಮನ್ ಜಾರಿ
ಪರಿಶಿಷ್ಟ ವಗರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ್ ಮಾತನಾಡಿ, ತಾಲೂಕಿನಲ್ಲಿ ಆದಿವಾಸಿ ಜೇನುಕುರುಬ ಸಮುದಾಯದ ಹಾಡಿಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಪಿಎಂ ಜನ್‌ಮನ್(ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ಮಹಾ ಅಭಿಯಾನ್)ಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಯೋಜನೆಯ ಮೊದಲ ಹಂತವಾಗಿ ಜ.3ರಿಂದ ಹಾಡಿಗಳಿಗೆ ತೆರಳಿ ಆಧಾರ್ ಕಾರ್ಡ್ ತಿದ್ದುಪಡಿಯಿಂದ ಆರಂಭಗೊಂಡು ಹೊಸ ಕಾರ್ಡ್ ನೋಂದಾಯಿಸುವ ಕಾರ್ಯ ಆರಂಭಿಸಲಾಗಿದೆ. ಈವರೆಗೆ 996 ಕಾರ್ಡ್‌ಗಳನ್ನು ನೀಡಲಾಗಿದೆ. 5 ವರ್ಷ ಒಳಪಟ್ಟ ಮಕ್ಕಳಿಗೆ ಜನನ ಪ್ರಮಾಣಪತ್ರ ಅವಶ್ಯಕತೆ ಇದೆ. ಆದರೆ ಆದಿವಾಸಿಗಳಿಗಾಗಿ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ನೀಡುವ ಕೈಬರಹದ ಜನನ ಪ್ರಮಾಣಪತ್ರವನ್ನೇ ಆಧಾರವಾಗಿಟ್ಟುಕೊಂಡು ಮಕ್ಕಳಿಗೂ ಆಧಾರ್‌ಕಾರ್ಡ್ ನೀಡಲು ಸರ್ಕಾರ ಆದೇಶಿಸಿದ್ದು, ಅದಕ್ಕೂ ಚಾಲನೆ ನೀಡಲಾಗಿದೆ ಎಂದರು.

ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ
ತಾಲೂಕಿನಲ್ಲಿ ಕೇಂದ್ರ ಸರ್ಕಾರದ ನೂತನ ಯೋಜನೆ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಂಡಿದ್ದು, ಮೊದಲ ಫಲಾನುಭವಿಯನ್ನೂ ಆರಿಸಲಾಗಿದೆ ಎಂದು ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅಶ್ವಿನಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 75 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ತಾಲೂಕಿನಿಂದ 5 ಸಾವಿರ ಜನ ಅರ್ಜಿ ಸಲ್ಲಿಸಿದ್ದು, ಪ್ರಥಮವಾಗಿ ಕಲ್ಕುಣಿಕೆ ಶೇಖರ್ ಆಯ್ಕೆಯಾಗಿದ್ದಾರೆ. ಯೋಜನೆಯಡಿ ಮೊದಲ ಹಂತವಾಗಿ 15 ಸಾವಿರ ರೂ.ಗಳನ್ನು ಸಕಲರಣೆಗಳ ಕಿಟ್ ಖರೀದಿಸಲು ನೀಡಲಾಗುತ್ತದೆ. ನಂತರ 7 ದಿನಗಳ ಕಾಲ ಇಲಾಖೆ ವತಿಯಿಂದ ಪ್ರತಿದಿನ 500 ರೂ.ಗಳ ಸ್ಟೈಫೆಂಡ್ ಜತೆ ತರಬೇತಿ ನೀಡಲಾಗುತ್ತದೆ. ನಂತರ 1 ಲಕ್ಷ ರೂ.ಗಳ ಸಾಲಸೌಲಭ್ಯ ನೀಡಲಾಗುವುದು. ಪ್ರತಿಯೊಬ್ಬ ಕುಶಲಕರ್ಮಿಗಳು ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

300 ರೇಷನ್ ಕಾರ್ಡ್‌ಗಳು ರದ್ದು
ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಪ್ರಭಾರ ಶಿರಸ್ತೇದಾರ್ ಶರವಣ ಮಾತನಾಡಿ, ತಾಲೂಕಿನಲ್ಲಿ ವಿವಿಧ ಕಾರಣಗಳಿಂದ 300 ರೇಷನ್ ಕಾರ್ಡ್‌ಗಳು ರದ್ದುಗೊಂಡಿವೆ. 8 ನಕಲಿ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ಹಣ ಬಿಡುಗಡೆಯಾಗಿಲ್ಲ. ಆದಿವಾಸಿಗಳಿಂದ 600 ಪಡಿತರ ಚೀಟಿಗಳಿಗೆ ಬೇಡಿಕೆ ಬಂದಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು. ತಾಲೂಕಿನಲ್ಲಿ ಒಟ್ಟು 79,529 ಕಾರ್ಡ್‌ಗಳಿದ್ದು, ಈ ಪೈಕಿ 687 ಅಂತ್ಯೋದಯ, 70,665 ಬಿಪಿಎಲ್ ಮತ್ತು 2550 ಎಪಿಲ್ ಕಾರ್ಡ್‌ದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net