

ಭದ್ರಾವತಿ: ಗಾಂಧಿನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ಆ.29ರಿಂದ ಸೆ.8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಗುರು ಸ್ಟೀವನ್ ಡೆಸಾ ಹೇಳಿದರು.
ವೆಳಾಂಗಣಿ ಮಾತೆಯು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೆ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾಳೆ. 11 ದಿನಗಳ ನಡೆಯುವ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರ, ರೋಗಿಗಳ, ಹಿರಿಯರ, ಸರ್ವರ ದಿನ ಸೇರಿ ಪ್ರತಿ ದಿನ ವಿವಿಧ ಧ್ಯೇಯವಾಕ್ಯಗಳೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
29ರಂದು ಸಂಜೆ 5.30ಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಎಸ್.ಜೆ.ಫ್ರಾನ್ಸಿಸ್ ಸೆರಾವೋ ಧ್ವಜಾರೋಹಣ ನೆರವೇರಿಸುವರು. 30ರಿಂದ ಸೆ.7ರವರೆಗೆ ಪ್ರತಿದಿನ ಸಂಜೆ 5.30ಕ್ಕೆ ಮೆರವಣಿಗೆ, ಪುಷ್ಪಾರ್ಚನೆ, ದಿವ್ಯ ಬಲಿಪೂಜೆ, ಆರೋಗ್ಯ ಸೌಖ್ಯಕ್ಕಾಗಿ ಪ್ರಾರ್ಥನೆ ನಡೆಯಲಿದೆ. ಸೆ.7ರಂದು ತೇರಿನ ಮೆರವಣಿಗೆ ನಡೆಯಲಿದ್ದು, ಪ್ರಮುಖ ಬೀದಿಗಳಲ್ಲಿ ತೇರು ಸಾಗಲಿದೆ ಎಂದರು.
ಸೆ.8ರಂದು ಆರೋಗ್ಯ ಮಾತೆಯ ಮಹೋತ್ಸವ ನಡೆಯಲಿದೆ. ಕಾರವಾರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡುಮಿಂಗ್ ಡಯಾಸ್ ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿಸ್ಟರ್ ವಿಲ್ಮಾ ಅಂತೋಣಿ ವಿಲ್ಸನ್, ಅಂತೋಣಿ, ಎಲಿಜಾ ಲಾರೆನ್ಸ್, ಪೌಲ್ ಡಿಸೋಜ ಇದ್ದರು.