

ಬೆಂಗಳೂರು: ಸರ್ಕಾರ ಈಚೆಗೆ ಘೋಷಿಸಿದ ಎರಡು ನಿಗಮಗಳ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ರಾಜಕೀಯ ಲಾಭ-ನಷ್ಟ ಏನೆಂಬುದರ ಬಗ್ಗೆಯೂ ವಿಶ್ಲೇಷಣೆ ನಡೆಯುತ್ತಿದೆ. ಉಪಚುನಾವಣೆ ಎದುರಿಗಿರುವ ಸಂದರ್ಭದಲ್ಲಿ ಮರಾಠ ಜನಾಂಗವನ್ನು ಗುರಿಯಾಗಿಸಿ ನಿಗಮ ರಚನೆ ಮಾಡಿದ್ದು, ಬಳಿಕ ವೀರಶೈವ ಲಿಂಗಾಯತ ಸಮುದಾಯಕ್ಕೂ ಒಂದು ನಿಗಮ ಘೋಷಿಸಿದ್ದು ವಿವಾದಕ್ಕೆ ಆಹಾರವಾಗಿದೆ. ಸರ್ಕಾರದೊಳಗೆ ನಿಗಮದ ಘೋಷಣೆ ಬಗ್ಗೆ ಒಮ್ಮತವಿಲ್ಲ. ಸರ್ಕಾರದ ಭಾಗವಾಗಿ ಸಚಿವರು ಜೈ ಎನ್ನುತ್ತಿದ್ದಾರೆ. ವೈಯಕ್ತಿಕವಾಗಿ ಅಪಸ್ವರ ಎತ್ತುತ್ತಿದ್ದಾರೆ. ನಿಗಮದಿಂದ ಯಾವ ಉದ್ದೇಶ ಈಡೇರುತ್ತದೆ ಎಂದು ಪ್ರಶ್ನೆ ಹಾಕುತ್ತಿದ್ದಾರೆ. ಸಮರ್ಥನೆಗೆ ನಿಂತಾಗ ಮಗ್ಗಲು ಬದಲಿಸುತ್ತಿದ್ದಾರೆ.
ಪ್ರತಿಪಕ್ಷಕ್ಕೂ ಈ ವಿಚಾರವನ್ನು ಅಷ್ಟು ಸುಲಭವಾಗಿ ಎತ್ತಿಕೊಳ್ಳಲು ಹಿಂದೇಟು ಹೊಡೆಯುವಂತಾಗಿದೆ. ಸರ್ಕಾರದ ತೀರ್ವನವನ್ನು ವಿರೋಧಿಸಿದರೆ ಎಲ್ಲಿ ಪಕ್ಷಕ್ಕೆ ಪೆಟ್ಟಾಗುತ್ತದೋ ಎಂದು ಕಾಂಗ್ರೆಸ್ ನಾಯಕರು ಹಿಂದೆ ಮುಂದೆ ನೋಡಿ ಎಚ್ಚರಿಕೆಯ ಹೇಳಿಕೆ ನೀಡಲಾರಂಭಿಸಿದ್ದಾರೆ. ಇನ್ನು ಕಾನೂನು ಸಚಿವ ಮಾಧುಸ್ವಾಮಿ ಸರ್ಕಾರದ ತೀರ್ಮಾನ ಸಮರ್ಥಿಸಿಕೊಂಡಿದ್ದು, ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಕಾರ್ಯಕ್ರಮ ಮಾಡಬೇಕಾದರೆ ಇದೆಲ್ಲ ಇರುತ್ತದೆ. ವಿರೋಧ ಮಾಡಬಾರದಿತ್ತು, ಮಾಡುತ್ತಿದ್ದಾರೆ. ನಾವು ಮುಂದುವರಿಯುತ್ತೇವೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಇದೇ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರದ ಮಂತ್ರಿಯಾಗಿ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಸಮಾಜದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವರು ಸ್ವಾಗತಿಸಿದ್ದಾರೆ, ಕೆಲವರು ಟೀಕಿಸುತ್ತಿದ್ದಾರೆ. ವೀರಶೈವ ಲಿಂಗಾಯತ ನಿಗಮ ಕುರಿತು ಉದ್ಯಮಿ ವಿಜಯ ಸಂಕೇಶ್ವರ ಅವರು ಆಕ್ಷೇಪಿಸಿದ್ದಾರೆ. ಸರಿ-ತಪ್ಪು ಚರ್ಚೆ ನಡೆಯುತ್ತಿದೆ. ನಡೆಯಲಿ. ಮರಾಠ ನಿಗಮದ ಬೇಡಿಕೆ ಬಹಳ ದಿನದ್ದು, ಈಡೇರಿಸಲಾಗಿದೆ ಎಂದು ಹೇಳಿದರು. ಕುರುಬ ನಿಗಮ ಅಗತ್ಯವಿದೆಯೇ ಎಂದರೆ, ನಿಗಮದಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇಲ್ಲ ಎಂದೇ ಹೇಳುತ್ತೇನೆ ಎಂದ ಈಶ್ವರಪ್ಪ, ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ವ್ಯಾಪ್ತಿಯಲ್ಲಿ ಗೊಂಡ ಎಂದು ಕರೆಸಿಕೊಳ್ಳುವ ಕುರುಬ ಸಮಾಜದವರಿಗೆ ಎಸ್ಟಿ ಮಾನ್ಯತೆ ಕೊಡುತ್ತಿದ್ದಾರೆ. ಉಳಿದ ಕಡೆ ಇದು ಸಿಗುತ್ತಿಲ್ಲ. ಎಲ್ಲ ಕಡೆಯೂ ಮಾನ್ಯತೆ ಸಿಗಬೇಕೆಂದು ಏಕತೆಯಿಂದ ಹೋರಾಟ ನಡೆಸುತ್ತಿದ್ದೇವೆ ಎಂದು ವಿವರಿಸಿದರು.