

ಬೆಂಗಳೂರು: ಯಾವುದೇ ಪರಾಮರ್ಶೆ ಇಲ್ಲದೆ, ಸುದ್ದಿಮೂಲವನ್ನು ಪರಿಶೀಲಿಸದೆ ಸುಳ್ಳುಸುದ್ದಿಯೊಂದನ್ನು ಪ್ರಕಟಿಸುವುದು ಸಮಾಜಕ್ಕೆ ಮಾಡುವ ಬಹುದೊಡ್ಡ ದ್ರೋಹ. ಇದರಿಂದ ಸಾಮಾಜಿಕ ಅನ್ಯಾಯವಾಗುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅಭಿಪ್ರಾಯಿಸಿದ್ದಾರೆ.
ಗಾಂಧಿ ಭವನದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಶ್ರಯದಲ್ಲಿ ಆಯೋಜಿಸಿದ್ದ ‘ಸುಳ್ಳುಸುದ್ದಿ ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ’ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಧ್ಯಮ ಒಂದು ಕಾಲದಲ್ಲಿ ತೀರಾ ಸಂಕಷ್ಟವನ್ನು ಎದುರಿಸುತ್ತಿತ್ತು. ತಂತ್ರಜ್ಞಾನ ಬೆಳೆದಂತೆಲ್ಲಾ ಮಾಧ್ಯಮ ಒಂದು ಉದ್ಯಮವಾಗಿ ಬದಲಾಗಿದೆ. ಆದರೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಯ ವಿಶ್ವಾಸಾರ್ಹತೆ ಬಗ್ಗೆ ಹಲವು ಸಂದರ್ಭದಲ್ಲಿ ಪ್ರಶ್ನೆಗಳು ಏಳುತ್ತಿವೆ. ತಾವೇ ಮೊದಲು ಸುದ್ದಿಯನ್ನು ಪ್ರಸಾರ ಮಾಡಬೇಕೆಂಬ ಧಾವಂತದಲ್ಲಿ ಸುದ್ದಿಯ ಸತ್ಯಾಸತ್ಯತೆಯನ್ನು ವಿಶ್ಲೇಷಣೆಗೊಳಪಡಿಸದೆ, ಕೇವಲ ಗೂಗಲ್ ಮಾಹಿತಿ ಆಧರಿಸಿ ಪ್ರಕಟಿಸುವುದರಿಂದ ಸಮಾಜದಲ್ಲಿ ದೊಡ್ಡ ಅನಾಹುತಗಳಾಗುತ್ತಿವೆ. ಇದು ಒಂದು ರೀತಿಯಲ್ಲಿ ಸಾಮಾಜಿಕ ಅನ್ಯಾಯವಾಗಿದ್ದು, ಈ ಬಗ್ಗೆ ಮಾಧ್ಯಮಗಳು ಎಚ್ಚರಿಕೆ ವಹಿಸಬೇಕು ಎಂದು ಬಿ.ಕೆ.ರವಿ ವಿವರಿಸಿದರು.
ಸಮಾರಂಭದಲ್ಲಿ ಎನ್‌ಡಿಟಿವಿ ನಿಕಟಪೂರ್ವ ಎಡಿಟರ್ ಶ್ರೀನಿವಾಸನ್ ಜೈನ್, ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್, ವಾರ್ತಾ ಮತ್ತು ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮತ್ತಿತರರು ಪಾಲ್ಗೊಂಡಿದ್ದರು.
ಬೆಳಗಿನಿಂದ ನಡೆದ ವಿವಿಧ ಗೋಷ್ಠಿಗಳಲ್ಲಿ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ಎಂ.ಸಿದ್ದರಾಜು, ಆಶಾ ಕೃಷ್ಣಸ್ವಾಮಿ, ರವೀಂದ್ರ ಭಟ್ಟ ಐನಕೈ, ಸುಭಾಷ್ ಹೂಗಾರ್ ಮತ್ತಿತರರು ಪಾಲ್ಗೊಂಡು ಮಾತನಾಡಿದರು. ಎನ್‌ಎಂಕೆಆರ್‌ವಿ, ಪ್ರೆಸಿಡೆನ್ಸಿ, ಸರ್ಕಾರಿ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
"ದೇಶದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವ ದೊಡ್ಡ ಜಾಲವಿದೆ. ಆ ಬಗ್ಗೆ ಜವಾಬ್ದಾರಿಯುತ ಮಾಧ್ಯಮಗಳು ಎಚ್ಚರ ವಹಿಸಬೇಕು. ಪ್ರತಿಯೊಂದನ್ನು ಜಿಹಾದ್ ಹೆಸರಲ್ಲಿ ಆರೋಪಿಸುವುದು ದೇಶದ ಸಾಮರಸ್ಯಕ್ಕೆ ತಂದೊಡ್ಡುವ ಅಪಾಯ. ದೊಡ್ಡ ದೊಡ್ಡ ಸ್ಥಾನದಲ್ಲಿರುವವರು ಕೂಡಾ ವಾಟ್ಸಾಪ್ ಮೆಸೆಜ್‌ಗಳನ್ನು ಚುನಾವಣೆ ಪ್ರಚಾರದಲ್ಲಿ ಬಳಸುತ್ತಿರುವುದು ಬಾಲಿಶತನ"
-ಶ್ರೀನಿವಾಸನ್ ಜೈನ್, ಹಿರಿಯ ಪತ್ರಕರ್ತ