ಕೊರಗಜ್ಜ ನಿರ್ದೇಶಕರಿಗೆ ಕಾರ್ ಗಿಫ್ಟ್​: ಚಿತ್ರದ ಮೊದಲ ಪ್ರತಿ ನೋಡಿ ನಿರ್ಮಾಪಕರು ಫುಲ್ ಖುಷ್

kia car
Published on

ಬೆಂಗಳೂರು: ನಿರ್ಮಾಪಕರು ತಮ್ಮ ನಿರ್ಮಾಣ ಸಿನಿಮಾದ ಮೊದಲ ಪ್ರತಿಯನ್ನು ವೀಕ್ಷಿಸುವ ಖುಷಿಗೆ ಪಾರವೇ ಇಲ್ಲ. ಅದರಲ್ಲೂ ಸಿನಿಮಾ ತಾವು ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಮೂಡಿಬಂದರೆ ಚಿತ್ರತಂಡಕ್ಕೆ ಬಹುಮೌಲ್ಯದ ಉಡುಗೊರೆಯನ್ನೇ ನೀಡುತ್ತಾರೆ. ಅದಕ್ಕೆ ಉದಾಹರಣೆ ಕನ್ನಡದ ‘ಕೊರಗಜ್ಜ’ ಸಿನಿಮಾ. ಚಿತ್ರದ ಮೊದಲ ಪ್ರತಿ ವೀಕ್ಷಿಸಿದ ನಿರ್ಮಾಪಕ ತ್ರಿವಿಕ್ರಮ್ ಸಲ್ಯ ಖುಷಿಯಾಗಿ ನಿರ್ದೇಶಕ ಸುಧೀರ್ ಅತ್ತಾವರ್‌ಗೆ ಕಿಯಾ ಕೇರನ್ಸ್ ಕಾರನ್ನೇ ಉಡುಗೊರೆಯಾಗಿ ನೀಡಿದ್ದಾರೆ. ಈ ಸಂಗತಿಯನ್ನು ನಟಿ ಭವ್ಯಾ ಇತ್ತೀಚೆಗೆ ಹಂಚಿಕೊಂಡಿದ್ದು, ಜತೆಗೆ ಚಿತ್ರದ ಭಾಗವಾಗಿರುವುದಕ್ಕೆ ಖುಷಿವ್ಯಕ್ತಪಡಿಸಿದ್ದಾರೆ.

‘ಕೊರಗಜ್ಜ’ ಸಿನಿಮಾ ಅಂದಾಜು 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ನಿರ್ಮಾಪಕ ತ್ರಿವಿಕ್ರಮ್, ‘‘ತ್ರಿವಿಕ್ರಮ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಈ ಮಟ್ಟದಲ್ಲಿ ಸಿನಿಮಾ ಒಂದು ಮೂಡಿಬರುತ್ತದೆ ಎಂದು ನಾನು ಊಹಿಸಿರಲಿಲ್ಲ. ಕೊರಗಜ್ಜ’ ಎಲ್ಲ ಊಹೆ ಮೀರಿ ಅದ್ಭುತವಾಗಿ ಮೂಡಿಬಂದಿದೆ. ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಶಿಷ್ಟ ಸಿನೆಮಾ ಆಗಲಿದೆ. ನಿರ್ದೇಶಕ ಸುಧೀರ್ ಒಂದೂವರೆ ವರ್ಷ ಅಧ್ಯಯನ ಮಾಡಿ 800 ವರ್ಷಗಳ ಹಿಂದೆ ಬದುಕಿದ್ದ ತನಿಯಾ ಎಂಬ ಆದಿವಾಸಿ ಹುಡುಗ ಮಹಾನ್ ಶಕ್ತಿ ಕೊರಗಜ್ಜ ಆಗುವ ಬಗೆಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ತೋರಿಸಿದ್ದಾರೆ. ಈ ಮಹಾನ್ ಶಕ್ತಿಯನ್ನು ಮರುಸೃಷ್ಟಿ ಮಾಡಿ ಸಸ್ಪೆನ್ಸ್, ಕುತೂಹಲ, ಥ್ರಿಲ್ಲರ್‌ನೊಂದಿಗೆ ಚಿತ್ರ ನಿರೂಪಿಸಲಾಗಿದೆ. ಕಬೀರ್ ಬೇಡಿ ಹಾಗೂ ನೂರಾರು ಕಲಾವಿದರನ್ನು ಬಳಸಿಕೊಂಡು ಚಿತ್ರೀಕರಿಸಿದ್ದ ಯುದ್ಧಭೂಮಿಯ ಪರಿಕಲ್ಪನೆಯಂತೂ ಜಗತ್ತಿನ ಯಾವುದೇ "ವಾರ್" ಸಿನೆಮಾ ಸ್ರಷ್ಟಿಸುವ ಸಂಚಲನವನ್ನು "ಕೊರಗಜ್ಜ" ಸಿನಿಮಾ ಸೃಷ್ಟಿಸಲಿದೆ. ಯುದ್ಧ ಸನ್ನಿವೇಷವನ್ನು ಚಿತ್ರೀಕರಿಸುವ ಸಮಯದಲ್ಲಿ ಕಬೀರ್ ಬೇಡಿ ಸುಧೀರ್ ಅತ್ತಾವರ್ ಅವರನ್ನು"ವಾಟರ್ ವರ್ಲ್ಡ್" ಚಿತ್ರದ ಹಾಲಿವುಡ್ ನಿರ್ದೇಶಕ ಕೆವಿನ್ ಹಾಲ್ ರೆಯ್ನಾಲ್ಡ್ಸ್ ಜತೆ ಯಾಕೆ ಕಂಪೇರ್ ಮಾಡಿದ್ದರು ಎನ್ನುವುದು ಈಗ ತಿಳಿದು ಬರುತ್ತಿದೆ ಎಂದು ನೆನಪಿಸಿಕೊಂಡರು.

ನಿರ್ದೇಶನ ಮಾತ್ರವಲ್ಲದೆ, ಸಿನೆಮಾಗೆ ಕಲಾ ನಿರ್ದೇಶನ, ಕಾಸ್ಟ್ಯೂಮ್ ಹಾಗೂ ಮೇಕಪ್ ಡಿಸೈನ್ ಕೂಡ ಸುಧೀರ್ ಅತ್ತಾವರ ಅಧ್ಭುತವಾಗಿ ಮಾಡಿದ್ದಾರೆ. ಸುಧೀರ್ ದೇಶಾದ್ಯಂತ ನೂರಾರು ನಾಟಕ ಪ್ರದರ್ಶನಗಳಲ್ಲಿ ಅಭಿನಯ, ಐವತ್ತರಷ್ಟು ನಾಟಕಗಳ ನಿರ್ದೇಶನ, ಮುಂಬಯಿಯ "ಇಪ್ಟಾ" ಮೊದಲಾದ ಸಂಸ್ಥೆಗಳ ನಂಟು. ಹೀಗೆ ರಂಗಭೂಮಿಯಲ್ಲಿ ಸಾಕಷ್ಟು ಪಳಗಿದ ಅವರ ಅನುಭವವೇ ಸಿನಿಮಾವನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ ಎಂದರು. ಅಂದಹಾಗೆ, ‘ಕೊರಗಜ್ಜ’ ಇದೇ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

"ಕೊರಗಜ್ಜ" ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಹೊಂದಲು ವೇದಿಕೆ ಸಜ್ಜಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net