ನಾಗಮಂಗಲ ಪಟ್ಟಣದಲ್ಲಿ ಪಥಸಂಚಲನ

1000642201
ನಾಗಮಂಗಲದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ 250ಕ್ಕೂ ಹೆಚ್ಚು ಪೊಲೀಸರು ಮತ್ತು ಗೃಹರಕ್ಷಕದಳದ ಸಿಬ್ಬಂದಿ ಪಥ ಸಂಚಲನ ನಡೆಸಿದರು.
Published on

ನಾಗಮಂಗಲ: ಗಣೇಶ ವಿಸರ್ಜನಾ ಪೂರ್ವ ಮೆರವಣಿಗೆ ಮತ್ತು ಈದ್‌ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ 250ಕ್ಕೂ ಹೆಚ್ಚು ಪೊಲೀಸರು ಮತ್ತು ಗೃಹರಕ್ಷಕದಳದ ಸಿಬ್ಬಂದಿ ಪಟ್ಟಣದಲ್ಲಿ ಶುಕ್ರವಾರ ಪಥ ಸಂಚಲನ ನಡೆಸಿದರು.

ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಪೊಲೀಸ್ ಪಥ ಸಂಚಲನ ಟಿ.ಮರಿಯಪ್ಪ ವೃತ್ತದ ಮಾರ್ಗವಾಗಿ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಹಳೇ ಟೋಲ್‌ಗೇಟ್ ಬಳಿ ತಿರುವು ಪಡೆದು ಮಕ್ಕಾಮಸೀದಿ ರಸ್ತೆ ಮೂಲಕ ಮುಸ್ಲೀಂ ಬ್ಲಾಕ್‌ಗಳಲ್ಲಿ ಸಂಚರಿಸಿ ಮಾಯಣ್ಣಗೌಡನಕೊಪ್ಪಲು ರಸ್ತೆ ಮೂಲಕ ಮೈಸೂರು ರಸ್ತೆಗೆ ಬಂದು ಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆ, ಕುಂಬಾರಬೀದಿ, ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ರಸ್ತೆ, ಪಡುವಲಪಟ್ಟಣ ರಸ್ತೆಯ ಬಡಗೂಡಮ್ಮದೇವಿ ಸರ್ಕಲ್, ಬ್ರಾಹ್ಮಣರ ಬೀದಿ ಸೇರಿದಂತೆ ಪಟ್ಟಣದಲ್ಲಿ ಗುರುತಿಸಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಸಂಚರಿಸಿದ ಬಳಿಕ ಪುನಃ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮುಕ್ತಾಯಗೊಳಿಸಲಾಯಿತು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಗಣೇಶ ಮತ್ತು ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆ ವತಿಯಿಂದ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಹಾಗಾಗಿ ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡುವ ಜತೆಗೆ ಸಣ್ಣ ಪುಟ್ಟ ಅಹಿತಕರ ಘಟನೆಗಳಿಗೂ ಅವಕಾಶ ನೀಡದಂತೆ ಯಾವುದೇ ಭಯವಿಲ್ಲದೆ ಸಂಭ್ರಮ ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ ಸೆ.4ರಂದು ಸಾಮೂಹಿಕ ಗಣೇಶ ವಿಸರ್ಜನೆ ಮತ್ತು ಸೆ.5ರಂದು ಈದ್‌ಮಿಲಾದ್ ಹಬ್ಬವಿರುತ್ತದೆ. ನಂತರದಲ್ಲಿ ಅನೇಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವುದರಿಂದ ಸೂಕ್ತ ಪೊಲೀಸ್ ಭದ್ರತೆ ಮಾಡಲಾಗುತ್ತಿದೆ. ಇದರ ಒಂದು ಭಾಗವಾಗಿ ಪಟ್ಟಣದಲ್ಲಿ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿ, ಗೃಹರಕ್ಷಕದಳ, ಕೆಎಸ್‌ಆರ್‌ಪಿ ಮತ್ತು ಡಿಆರ್ ತುಕಡಿಗಳೊಂದಿಗೆ ರೂಟ್ ಮಾರ್ಚ್ ನಡೆಸಲಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮಂಡ್ಯ ನಗರ ಸೇರಿದಂತೆ ಶ್ರೀರಂಗಪಟ್ಟಣದಲ್ಲಿಯೂ ಕೂಡ ರೂಟ್ ಮಾರ್ಚ್ ನಡೆಸಲಾಗುವುದು. ಒಟ್ಟಾರೆ ಈ ಬಾರಿ ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಎಲ್ಲ ರೀತಿಯಲ್ಲಿಯೂ ಸಜ್ಜಾಗಿದೆ. ಇದಕ್ಕೆ ಪೂರಕವಾಗಿ ಸಾರ್ವಜನಿಕರು ಸಹಕರಿಸಬೇಕು. ಹಬ್ಬದ ಆಚರಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಏನೆಲ್ಲಾ ಸಹಕಾರ ನೀಡಬೇಕೋ ಎಲ್ಲವನ್ನೂ ನೀಡಲಾಗುವುದು ಎಂದರು.

ಕಳೆದ ವರ್ಷ ಪಟ್ಟಣದಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ 55ಮಂದಿಯನ್ನು ವಶಕ್ಕೆ ಪಡೆದು 24ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಆ ಪ್ರಕರಣದ ತನಿಖೆ ಮುಗಿದು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಸುಮಾರು 189ಜನರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಅವರೆಲ್ಲರ ಮೇಲೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಜತೆಗೆ ಹಬ್ಬದ ಸಂದರ್ಭಗಳಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಬಹುದೆಂಬ ಕಾರಣಕ್ಕೆ ಅವರ ಚಟುವಟಿಕೆ, ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿರಿಸಲಾಗಿದೆ ಎಂದರು.

ಎಎಸ್‌ಪಿ ತಿಮ್ಮಯ್ಯ, ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್, ಪಿಎಸ್‌ಐಗಳಾದ ವೈ.ಎನ್.ರವಿಕುಮಾರ್, ರಾಜೇಂದ್ರ, ಮಾರುತಿ ಸೇರಿದಂತೆ 4ಕೆಎಸ್‌ಆರ್‌ಪಿ, 2 ಜಿಲ್ಲಾ ಶಸಸ್ತ್ರ ಮೀಸಲು ಪಡೆ ಸೇರಿ ಒಟ್ಟು 250ಕ್ಕೂ ಹೆಚ್ಚು ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಪಥಸಂಚಲನ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net