ರಾಯಚೂರು ವಿವಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಸಮಸ್ಯೆ

Published on

ರವಿಕುಮಾರ ಬೆಟ್ಟದಪುರ ಮೈಸೂರು
ರಾಯಚೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್ ಮೂಲಕ ಅರ್ಜಿ ಕರೆದಿದೆ. ಆದರೆ, ಕೆಇಎ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.


ಕಲ್ಯಾಣ ಕರ್ನಾಟಕ ವೃಂದದಲ್ಲಿ 18 ಸಹಾಯಕ ಪ್ರಾಧ್ಯಾಪಕ ಹಾಗೂ ಉಳಿಕೆ ಮೂಲ ವೃಂದದಲ್ಲಿ (ರಾಜ್ಯಾದ್ಯಂತ) 6 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ. ಆಗಸ್ಟ್ 5ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಆ.25 ಅರ್ಜಿ ಸಲ್ಲಿಕೆಯ ಕಡೆಯ ದಿನವಾಗಿದೆ. ಕೊನೆಯ ದಿನ ಸಮೀಪಿಸುತ್ತಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಈ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.


ತಾಂತ್ರಿಕ ಸಮಸ್ಯೆ ಏನು?
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಸಲ್ಲಿಸಲು ನೀಡಿರುವ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಎಲ್ಲ ಮಾಹಿತಿಗಳನ್ನು ತುಂಬಿದ ಬಳಿಕ ಅಂತಿಮವಾಗಿ ಸಬ್‌ಮಿಟ್ ಮಾಡಿದಾಗ ಅರ್ಜಿ ತೆಗೆದುಕೊಳ್ಳುತ್ತಿಲ್ಲ. ಮೊದಲ ಹಂತದಲ್ಲೇ ರಿಜಿಸ್ಟ್ರೇಷನ್ ಮಾಡಲು ಸಾಧ್ಯವಾಗದಿದ್ದರೆ, ದಾಖಲಾತಿ ಸಲ್ಲಿಸಲು ಎರಡನೇ ಹಂತಕ್ಕೆ ಹೋಗಲಾಗುವುದಿಲ್ಲ. ಹೀಗಾಗಿ, ಕಳೆದೊಂದು ವಾರದಿಂದಲೂ ಸೈಬರ್ ಸೆಂಟರ್ ಸೇರಿದಂತೆ ಹಲವಾರು ಕಡೆಗಳಲ್ಲಿ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಆತಂಕ ತೋಡಿಕೊಂಡಿದ್ದಾರೆ.


ಸಹಾಯವಾಣಿ ಸ್ವೀಕರಿಸುವವರೇ ಇಲ್ಲ:
ಅರ್ಜಿ ಸಲ್ಲಿಸುವಾಗ ಯಾವುದೇ ಸಮಸ್ಯೆ ಎದುರಾದರೂ ನಿವಾರಣೆಗೆ ಕರೆ ಮಾಡುವಂತೆ ಪ್ರಾಧಿಕಾರದಿಂದಲೇ ಸಹಾಯವಾಣಿ ಸಂಖ್ಯೆ 080-23460460 ನೀಡಿದ್ದಾರೆ. ಆದರೆ, ನಿತ್ಯ ನೂರಾರು ಬಾರಿ ಕರೆ ಮಾಡಿದರೂ ಸ್ವೀಕರಿಸುವವರೆ ಇಲ್ಲ. ಇನ್ನು ರಾಯಚೂರು ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಕರೆ ಮಾಡಿದರೆ, ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಮಸ್ಯೆಯಾಗಿದ್ದು, ಅವರನ್ನೇ ಸಂಪರ್ಕಿಸಿ ಎಂದು ಉತ್ತರ ನೀಡುತ್ತಾರೆ ಎಂದು ಉಳಿಕೆ ಮೂಲ ವೃಂದದ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.


ಕೆಇಎ ನಿರ್ಲಕ್ಷೃ ಅಭ್ಯರ್ಥಿಗಳಿಗೆ ಸಂಕಟ:
ಇತ್ತೀಚೆಗೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಕೆ-ಸೆಟ್ ಪರೀಕ್ಷೆ ಸೇರಿದಂತೆ ಬಹುತೇಕ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದೆ. ಕೆಇಎ ಯಾವುದೇ ಹುದ್ದೆಗಳ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದರೂ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಸಮಸ್ಯೆ ಉಂಟಾದಲ್ಲಿ ಸಂಪರ್ಕಿಸಿ ಎಂದು ಕಾಟಾಚಾರಕ್ಕೆ ಸಹಾಯವಾಣಿ ಸಂಖ್ಯೆ ನೀಡುತ್ತಾರೆ. ಕರೆ ಮಾಡಿದರೆ ಸ್ವೀಕರಿಸುವವರೆ ಇರುವುದಿಲ್ಲ. ಅರ್ಜಿ ಸಲ್ಲಿಸುವಾಗ ಉಂಟಾಗುವ ಸಮಸ್ಯೆ ಹೇಳಿಕೊಳ್ಳಲು ಒಂದು ವ್ಯವಸ್ಥೆಯೇ ಕೆಇಎನಲ್ಲಿ ಇಲ್ಲ. ಸರ್ಕಾರ, ವಿಶ್ವವಿದ್ಯಾಲಯಗಳು ಇಂತಹ ಸಂಸ್ಥೆಗಳಿಗೆ ಅರ್ಜಿ ಕರೆದು ಪರೀಕ್ಷೆ ನಡೆಸುವ ಜವಾಬ್ದಾರಿ ಏಕೆ ನೀಡುತ್ತವೆ ಎಂಬುದೇ ಗೊತ್ತಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಇಎ ವೆಬ್‌ಸೈಟ್‌ಗೆ ಈಗಾಗಲೇ ಕೆಲವು ಅರ್ಜಿಗಳು ಬಂದಿವೆ. ಆದರೆ, ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿರುವ ಬಗ್ಗೆ ಗೊತ್ತಿರಲಿಲ್ಲ. ಇದೀಗ ದೂರು ಕೇಳಿಬಂದಿರುವುದರಿಂದ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು..ಎಚ್. ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಒಂದು ವಾರದಿಂದ ಪತ್ರಿಕೋದ್ಯಮ ವಿಷಯದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಅರ್ಜಿ ಸಬ್‌ಮಿಟ್ ಆಗುತ್ತಿಲ್ಲ. ಸಹಾಯವಾಣಿಗೆ ಕರೆ ಮಾಡಿದರೂ ಯಾರೂ ಸ್ವೀಕರಿಸುತ್ತಿಲ್ಲ. ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವುದರಿಂದ ಆತಂಕವಾಗುತ್ತಿದೆ.ದರ್ಶನ್, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net