

ತಿ.ನರಸೀಪುರ : ತಾಲೂಕಿನ ಮೂಗೂರು ಗ್ರಾಮ ಪಂಚಾಯಿತಿ ಕೇಂದ್ರದಿಂದ 3 ಕಿಲೋಮೀಟರ್ ದೂರದಲ್ಲಿರುವ ಹೊಸಳ್ಳಿ ಗ್ರಾಮದಲ್ಲಿ 400 ರಿಂದ 500 ಕುಟುಂಬ ವಾಸವಾಗಿವೆ. ಇದು ಹಲವು ವರ್ಷಗಳಿಂದ ಸೌಕರ್ಯವಂಚಿತ ಗ್ರಾಮವಾಗಿದೆ. ಎರಡು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಅದು ಜನರ ಬಳಕೆಗೆ ಬಾರದಂತಾಗಿದೆ. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ದೊರಕದೆ ಪರದಾಡುವಾಗುತ್ತಿದೆ. ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಗ್ರಾಪಂ, ತಾಪಂ ಕಚೇರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದರೂ ಅದನ್ನು ಬಳಕೆಗೆ ನೀಡುವಲ್ಲಿ ವಿಫಲವಾಗಿದ್ದಾರೆ. ಗ್ರಾಮದ ಸಮುದಾಯ ಭವನ ನಿರ್ಮಾಣ ಕಾಮಗಾರಿಯೂ ಹಲವು ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಪ್ರತಿ ವರ್ಷ ಗ್ರಾಮದಲ್ಲಿ ನಡೆಯುವ ಪುರಾಣಪ್ರಸಿದ್ಧ ತ್ರಿಪುರ ಸುಂದರಿ ಅಮ್ಮನವರ ಜಾತ್ರೆ ಸಂದರ್ಭ ರಾಜ್ಯದ ವಿವಿಧ ಭಾಗದಿಂದ ಚಿಗುರು ಕಡಿಯುವ ಪವಾಡ ನೋಡಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮೂಲಸೌಕರ್ಯ ವಂಚಿತ ಗ್ರಾಮವಾದ ಕಾರಣ ಭಕ್ತರು ಬೇಸರ ಪಟ್ಟುಕೊಂಡೇ ಹೋಗುತ್ತಾರೆ. ತಾಲೂಕಿನ ಕಟ್ಟಕಡೆಯ ಗ್ರಾಮವೇ ಹೊಸಳ್ಳಿ. ಪಕ್ಕದ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಈ ಗ್ರಾಮ ಈವರೆಗೆ ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ. ಮೂಗೂರಿನಿಂದ ಇಲ್ಲಿಗೆ ಯಾವುದೇ ಬಸ್ ಸೌಲಭ್ಯ ಇಲ್ಲ. ರಸ್ತೆ ಡಾಂಬರಿಕರಣ ಕಂಡು ದಶಕಗಳೇ ಆಗಿದೆ ಎಂಬುದು ಗ್ರಾಮಸ್ಥರ ಆರೋಪ. ಮೂಗೂರು- ಹೊಸಳ್ಳಿ ವ್ಯಾಪ್ತಿಯಲ್ಲಿ ಗ್ರಾಪಂಗೆ 3 ಜನ ಸದಸ್ಯರಿದ್ದಾರೆ. ಅವರು ಆ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸೂಕ್ತವಾಗಿ ಗಮನಹರಿಸುತ್ತಿಲ್ಲ.
ಹೊಸಳ್ಳಿ ಗ್ರಾಮದ ಸ್ವಚ್ಛತೆ, ಕುಡಿಯುವ ನೀರು ಮತ್ತು ಬೀದಿ ದೀಪಗಳನ್ನು ಆಗಿಂದಾಗ್ಗೆ ಸರಿಪಡಿಸಿಕೊಂಡು ಕ್ರಮ ವಹಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.