

ಕಾಬುಲ್: ಸಾವಿರಾರು ತಾಲಿಬಾನ್ ಬೆಂಬಲಿಗರು ಇಂದು ಕಾಬುಲ್ನ ಉತ್ತರಭಾಗಕ್ಕಿರುವ ಕೊಹ್ದಾಮನ್ ಪಟ್ಟಣದ ಮೈದಾನದಲ್ಲಿ ತಾಲಿಬಾನ್ ವಿಜಯೋತ್ಸವದಲ್ಲಿ ಭಾಗವಹಿಸಿದರು. ಅಫ್ಘಾನಿಸ್ತಾನದ ಆಳ್ವಿಕೆಯನ್ನು ತಾಲಿಬನ್ ಪುನಃ ಪಡೆದಿರುವ ಬಗ್ಗೆ ವಿವಿಧ ನಾಯಕರು ಭಾಷಣಗಳನ್ನು ನೀಡಿದಂತೆ, ತಾಲಿಬಾನ್ ಪರ ಘೋಷಣೆಗಳನ್ನು ಕೂಗಲಾಯಿತು ಎನ್ನಲಾಗಿದೆ.
ತಾಲಿಬಾನ್ ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿದ ನಂತರ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ನಡೆದಿದೆ ಎನ್ನಲಾಗಿದ್ದು, ಪುರುಷರು ಮತ್ತು ಬಾಲಕರು ಮಾತ್ರ ಭಾಗವಹಿಸಿದರು. ಟ್ರಕ್ಗಳಲ್ಲಿ ಸ್ಥಳಕ್ಕೆ ಆಗಮಿಸಿದ ಜನರು, ಮನೆಯಲ್ಲೇ ಮಾಡಿದ ಪೋಸ್ಟರ್ಗಳನ್ನು ಮತ್ತು ಕೆಂಪು-ಬಿಳುಪು ತಾಲಿಬಾನ್ ಹೆಡ್ಬ್ಯಾಂಡ್ಗಳನ್ನು ಧರಿಸಿ ತಮ್ಮ ಬೆಂಬಲ ಸೂಚಿಸಿದರು ಎಂದು ವರದಿ ತಿಳಿಸಿದೆ.
ಈ ಸಮಾರಂಭದ ಆರಂಭದಲ್ಲಿ ತಾಲಿಬಾನ್ ಸಿಬ್ಬಂದಿಯು ಬಾವುಟಗಳನ್ನು ಹಿಡಿದು ಮತ್ತು ರಾಕೆಟ್ ಲಾಂಚರ್ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಹೊತ್ತು ಪೆರೇಡ್ ಮಾಡಿದರು. ಈ ಸಂದರ್ಭದಲ್ಲಿ 'ಅಮೆರಿಕಾ ಪರಾಭವಗೊಂಡಿದೆ... ಅಸಾಧ್ಯ ಅಸಾಧ್ಯ ಆದರೆ ಸಾಧ್ಯವಾಗಿದೆ...' ಎಂಬ ಸಾಹಿತ್ಯವುಳ್ಳ ಹಾಡೊಂದನ್ನೂ ಹಾಡಲಾಯಿತು ಎನ್ನಲಾಗಿದೆ. (ಏಜೆನ್ಸೀಸ್)