ಸ್ಯಾಂಡಲ್​ವುಡ್​ನ ಈ ಇಬ್ಬರು ಸ್ಟಾರ್​ಗಳ ಜತೆ ನಟಿಸುವ ಆಸೆಯಿದೆ; ನಟಿ ಪ್ರಿಯಾಂಕಾ ಹೆಸರಿಸಿದ ನಟರು ಇವರೇ

Untitled design (65)
Published on

ಬೆಂಗಳೂರು: ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ, ಚಿತ್ರರಸಿಕರಿಂದ ಸೈಎನಿಸಿಕೊಂಡ ನಟಿ ಪ್ರಿಯಾಂಕಾ ಮೋಹನ್, ​​ಸದ್ಯ ಮುಂಬರುವ ಚಿತ್ರಗಳ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾದ ಪ್ರಿಯಾಂಕಾ, ತಾನು ಕೋಟಿ ರೂ. ಕೊಟ್ಟರೂ ಬೆಡ್​ರೂಂ ಸೀನ್ ಅಥವಾ ಲಿಪ್​ಲಾಕ್​ ಸೀನ್​ಗಳನ್ನು ಮಾಡುವುದಿಲ್ಲ ಎಂದು ನೇರವಾಗಿ ಹೇಳಿದರು. ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿ, ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು.

ತನ್ನ ಸರಳ ಪಾತ್ರಗಳಿಂದಲೇ ಸಿನಿರಸಿಕರ ಮನಗೆದ್ದಿರುವ ಪ್ರಿಯಾಂಕಾ, 2021ರಲ್ಲಿ ನಟ ಶಿವಕಾರ್ತಿಕೆಯನ್​ ಅಭಿನಯದ ಡಾಕ್ಟರ್​ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಹಲವಾರು ಸೂಪರ್​ ಹಿಟ್​ ಚಿತ್ರಗಳಲ್ಲಿ ಮಿಂಚಿದ ನಟಿ, ಕಳೆದ ನಾಲ್ಕು ದಿನಗಳ ಹಿಂದೆ 'ಟಿಕ್​ ಟಾಕ್' ಚಿತ್ರದ ನಿರ್ಮಾಪಕರ ಆರೋಪಕ್ಕೆ ಸಿಲುಕಿ ಸುದ್ದಿಯಾದರು.

ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಅಭಿನಯದ 20 ನಿಮಿಷಗಳ ದೃಶ್ಯಗಳನ್ನು ಬಿಡುಗಡೆ ಸಮಯದಲ್ಲಿ ಡಿಲೀಟ್ ಮಾಡಲಾಗಿದೆ ಎಂದು ಹೇಳಿದ ನಿರ್ಮಾಪಕರು, ಇದರಿಂದ ತನಗೆ ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸುವಂತಾಯಿತು ಎಂದು ಆರೋಪಿಸಿ ಚೆನ್ನೈನಲ್ಲಿ ದೂರು ದಾಖಲಿಸಿದ್ದರು. ಈ ವಿವಾದದ ಬೆನ್ನಲ್ಲೇ ಪ್ರಿಯಾಂಕಾ ಕೊಟ್ಟ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಯಿತು. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿಗೆ ಕನ್ನಡ ಚಿತ್ರರಂಗದ ಯಾವ ನಟರೊಂದಿಗೆ ಅಭಿನಯಿಸಲು ಇಚ್ಚಿಸುತ್ತೀರಾ? ಎಂದು ಕೇಳಲಾಯಿತು. ಈ ಪ್ರಶ್ನೆಗೆ ನಟಿ ಕೊಟ್ಟ ಉತ್ತರ ಹೀಗಿದೆ.

ನನಗೆ ಅವಕಾಶ ಸಿಕ್ಕರೇ ರಾಕಿಂಗ್ ಸ್ಟಾರ್ ಯಶ್ ಮತ್ತು ರಕ್ಷಿತ್ ಶೆಟ್ಟಿ ಅವರೊಂದಿಗೆ ಅಭಿನಯಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಪ್ರಿಯಾಂಕಾ ಅವರ ಈ ಹೇಳಿಕೆಗೆ ಅಭಿಮಾನಿಗಳು ಮೆಚ್ಚಿದ್ದು, ಒಂದೊಳ್ಳೆ ಸಿನಿಮಾ ಮಾಡುವ ಅವಕಾಶ ಶೀಘ್ರವೇ ಕೂಡಿಬರಲಿ ಎಂದು ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net