

ಬೆಂಗಳೂರು: ಕಾಂಗ್ರೆಸ್ ಮಿತ್ರಕೂಟ ಐಎನ್‌ಡಿಐಎ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರ ಮಂಗಳಸೂತ್ರ, ಕೂಡಿಟ್ಟ ಹಣ, ಸಂಪತ್ತನ್ನು ಕಿತ್ತು ಅವರ ಪ್ರೀತಿಪಾತ್ರರಿಗೆ ನೀಡುತ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆಪಾದನೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜನರು ಎದುರಿಸುತ್ತಿರುವ ಸಮಸ್ಯೆಗೆ ಸ್ಪಂದಿಸದ ಮೋದಿ ಚುನಾವಣೆ ಎದುರಾದಾಗ ಹೆದರಿಸಿ ಮತ ಹಾಕಿಸಿಕೊಳ್ಳಲು ಹೊರಟಿರುವುದಕ್ಕೆ ನಾಚಿಕೆ ಆಗಬೇಕು ಎಂದರು.
ಬೆಲೆ ಏರಿಕೆ, ನಿರುದ್ಯೋಗ, ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರದ ಕೊರತೆ ಕುರಿತು ಚರ್ಚೆ ನಡೆಸಲಿ, ಕಳೆದ ಹತ್ತು ವರ್ಷದಲ್ಲಿ ಈ ಕ್ಷೇತ್ರದಲ್ಲಿ ಏನು ಮಾಡಿದರು ಎಂದು ಹೇಳಲಿ ಎಂದು ಮೋದಿಗೆ ಸವಾಲು ಹಾಕುತ್ತೇನೆಂದರು.
ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಕಷ್ಟ ಅನುಭವಿಸಿದಾಗ ಮೋದಿ ಎಲ್ಲಿದ್ದರು? ಹೋರಾಟದಲ್ಲಿ 600 ರೈತರು ಮೃತರಾದರು, ಆ ರೈತರ ಪತ್ನಿಯರ ಮಾಂಗಲ್ಯ ಸೂತ್ರದ ಬಗ್ಗೆ ಯೋಚಿಸಿದ್ದಾರೆಯೇ? ಮಣಿಪುರದಲ್ಲಿ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯ ಮಾಂಗಲ್ಯ ಸೂತ್ರದ ಬಗ್ಗೆ ಮೋದಿ ಯೋಚಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಜನರ ಸಮಸ್ಯೆ, ದೇಶದ ಪ್ರಗತಿ ಕುರಿತು ಚರ್ಚೆಯಾಗಬೇಕಾಗಿತ್ತು. ಆದರೆ, ಮಂಗಲ ಸೂತ್ರದ ಚರ್ಚೆ ನಡೆದಿದೆ. ಸ್ವಾತಂತ್ರ್ಯ ಎಂದು ಎಷ್ಟು ವರ್ಷವಾಯಿತು, ಕಾಂಗ್ರೆಸ್ ಆಡಳಿತ ನಡೆಸಿದೆ, ನಮ್ಮ ಅಜ್ಜಿ ಆಭರಣ ಅಡ ಇಟ್ಟು ಯುದ್ಧದಲ್ಲಿ ಸೈನಿಕರ ನೆರವಿಗೆ ಬಂದರು, ನಮ್ಮ ತಾಯಿಯ ಮಂಗಳ ಸೂತ್ರ ಈ ನೆಲದಲ್ಲಿದೆ. ಅದೇ ಕುಟುಂಬದ ಇತಿಹಾಸ ಎಂದು ಗುಡುಗಿದರು.
ಮೋದಿ ಆಡಳಿತ ಹತ್ತು ವರ್ಷದಲ್ಲಿ ನಿಮಗೆ ಸಿಕ್ಕಿದ್ದೇನು? ಎಂದು ಮತದಾರರು ಯೋಚಿಸಬೇಕು. ಅವರ ಆಡಳಿತದಲ್ಲಿ ಬದಲಾವಣೆ ಆಗಿದೆಯೇ? ಎಂದು ಪ್ರಶ್ನಿಸಿಕೊಳ್ಳಿ ಎಂದ ಅವರು ಪ್ರತಿ ದಿನ ಸೂಪರ್ ಮ್ಯಾನ್ ಇಮೇಜ್ ಮೂಲಕ ಕಾಣಿಸಿಕೊಂಡರು. ಅದು ನಿಜಾಂಶ ಅಲ್ಲ ಬೆಲೆ ಏರಿಕೆ ಮಾಡಿ ನಿಮ್ಮ ಮುಂದೆ ನಿಂತಿದ್ದಾರೆ. ಪ್ರಗತಿಯನ್ನೂ ಮಾಡಲಿಲ್ಲ, ಪ್ರತಿಯೊಬ್ಬರೂ ಕಷ್ಟ ಅನುಭವಿಸುತ್ತಿದ್ದಾರೆ, ಅದೇ ನಿಜಾಂಶ ಎಂದರು.
ಪ್ರಧಾನಿ ಮಂತ್ರಿಗೆ ಕೆಲವು ಮಿತ್ರರಿದ್ದಾರೆ, ಅವರಿಗೆ ಎಷ್ಟು ಇಷ್ಟ ಎಂದರೆ ನೀತಿ ನಿಯಮ ಅವರಿಗಾಗಿಯೇ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣ, ಬಂದರು, ವಿದ್ಯುತ್, ಸಾರ್ವಜನಿಕ ಉದ್ದಿಮೆಗಳನ್ನು ಸ್ನೇಹಿತರ ಪಾಲು ಮಾಡುತ್ತಿದ್ದಾರೆ. ಸಣ್ಣ, ಮಧ್ಯಮ ವ್ಯಾಪಾರಿಗಳು ಮೋದಿ ಸ್ನೇಹಿತರಲ್ಲ. ಅವರ ಪರವಾಗಿ ನೀತಿಗಳು ಮಾಡುತ್ತಿಲ್ಲ. ಸಹಾಯ ಮಾಡುತ್ತಿಲ್ಲ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳು ಬಡವರು, ಮಧ್ಯಮ, ಕಾರ್ಮಿಕರು, ರೈತರಿಗೆ ಸಹಾಯಕವಾಗಿಲ್ಲ. ಐದು ಕೆಜಿ ಅಕ್ಕಿ ಕೊಟ್ಟು, ಸಣ್ಣ ಪುಟ್ಟ ಯೋಜನೆ ಮಾಡಿ ತೃಪ್ತಿ ಪಡಿಸುವ ಪ್ರಯತ್ನ ಮಾಡಿದ್ದಾರೆಂದರು.
ಇಂದು ಮೋದಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಹೊರಟಿದ್ದಾರೆ. ಜನರ ಸಾಂವಿಧಾನಿಕ ಹಕ್ಕು ಕಡಿಮೆ ಮಾಡಲು ಹೊರಟಿದ್ದಾರೆ. ಚುನಾವಣೆಗೆ ಮುನ್ನ ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಲಾಯಿತು.ಅತೀ ದೊಡ್ಡ ರಾಷ್ಟ್ರೀಯ ಪಕ್ಷದ ಬ್ಯಾಂಕ್ ಖಾತೆ ಸೀಜ್ ಮಾಡಿಸಿದರು ಎಂದು ಅಸಮಾಧಾನ ಹೊರಹಾಕಿದ ಅವರು, ದೇಶದಲ್ಲಿ, ಪ್ರಪಂಚದಲ್ಲಿ ಎಲ್ಲರೂ ಭ್ರಷ್ಟರು, ಭ್ರಷ್ಟರಾಗದೇ ಇರುವವರು ತಾವೊಬ್ಬರೇ ಅಂದುಕೊಂಡಿದ್ದಾರೆ ಎಂದು ಕುಟುಕಿದರು.
ದೇಶದ ಮುಂದೆ ಬಹಳಷ್ಟು ಸಮಸ್ಯೆ ಇದೆ. ಬಿಜೆಪಿ ನಾಯಕರು ಹಗಲು ರಾತ್ರಿ ಸುಳ್ಳು ಹೇಳುತ್ತಿದ್ದಾರೆ. ನಾವು ಸಮಸ್ಯೆ ಪರಿಹಾರದ ಬಗ್ಗೆ ಮಾತನಾಡಿದರೆ ಸುಳ್ಳು ಹೇಳಿ ಕೊಂಡು ಓಡಾಡುತ್ತಿದ್ದಾರೆ. ಹಿಂದು -ಮುಸ್ಲಿಂ ಎಂದು ಎಷ್ಟು ವರ್ಷ ಚುನಾವಣೆ ನಡೆಸುತ್ತಾರೆ. ನಿರ್ಧಾರ ಮಾಡಬೇಕಾಗಿರುವುದು ಜನತೆ, ನಿಮಗೆ ನೈತಿಕ ರಾಜನೀತಿ ಬೇಕೋ ನಾಟಕದ ರಾಜನೀತಿ ಬೇಕೋ ಎಂದು ನಿರ್ಧರಿಸಬೇಕೆಂದು ಕರೆಕೊಟ್ಟರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕಳೆದ ಬಾರಿ 27 ಸಂಸದರು ರಾಜ್ಯದ ಪರ ನಿಲ್ಲಲಿಲ್ಲ. ಬರ ಪರಿಹಾರ ಕೊಡಿಸುವಲ್ಲೂ ಇವರು ನೆರವಾಗಲಿಲ್ಲ. ತೆರಿಗೆ ಅನ್ಯಾಯದ ಬಗ್ಗೆ ಸಂಸದರು ದನಿ ಎತ್ತಲಿಲ್ಲ. ಮೇಕೆದಾಟು ಯೋಜನೆ ಜಾರಿಗೆ ಅನುಮತಿಕೊಡಿಸುವಲ್ಲೂ ಸಂಸದರು ಪ್ರಯತ್ನಿಸಲಿಲ್ಲ. ರಾಜ್ಯದ ಸಂಕಷ್ಟಕ್ಕೆ ಆಗಿಬಾರದ ಬಿಜೆಪಿ ಸಂಸದರು ಮನೆಯಲ್ಲಿ ಇರುವುದೇ ಸೂಕ್ತ ಎಂದರು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಕೆ.ಜೆ.ಜಾರ್ಜ್, ಉಮಾಪತಿ ಗೌಡ ಸೇರಿ ಹಲವು ನಾಯಕರಿದ್ದರು.