ರಾಹುಲ್ ಗಾಂಧಿ ದಾಖಲೆ ಮುರಿದ ಪ್ರಿಯಾಂಕಾ ಭರ್ಜರಿ ಮುನ್ನಡೆ! ಕಡೆಗೂ ತಮ್ಮ ನಾಯಕಿಯ 'ಕೈ' ಬಿಡಲಿಲ್ಲ ವಯನಾಡು ಜನತೆ | By Election

ವಿಜಯವಾಣಿ - 2024-11-23T130601.563
Published on

ಕೇರಳ: ಇಂದು ವಯನಾಡು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಅಭ್ಯರ್ಥಿ ಸತ್ಯನ್ ಮೊಕೇರಿ ಮತ್ತು ಎನ್​ಡಿಎ ಅಭ್ಯರ್ಥಿ ನವ್ಯಾ ಹರಿದಾಸ್‌ ವಿರುದ್ಧ ದಾಖಲೆ ಮಟ್ಟಕ್ಕೆ ಭಾರೀ ಅಂತರದಲ್ಲಿ ಗೆಲುವು ದಾಖಲಿಸಿರುವ ಪ್ರಿಯಾಂಕಾ ಗಾಂಧಿ, 3 ಲಕ್ಷ ಮತಗಳ ಅಂತರದಲ್ಲಿ ಭರ್ಜರಿ ಪೈಪೋಟಿ ಕೊಟ್ಟು, ಇದೀಗ ಗೆಲುವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಸಹೋದರ ರಾಹುಲ್​ ಗಾಂಧಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಬೆನ್ನಲ್ಲೇ ತಮ್ಮ ಚೊಚ್ಚಲ ಪೈಪೋಟಿಯನ್ನು ವಯನಾಡಿನಿಂದ ಆರಂಭಿಸಿದ ವಾದ್ರಾಗೆ ಇದೀಗ ಊಹೆಗೂ ಮೀರಿದ ಗೆಲುವು ಸಿಕ್ಕಿದೆ. ಆದರೆ, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.

ಮಧ್ಯಾಹ್ನ 12:30ರ ಹೊತ್ತಿಗೆ ಪ್ರಿಯಾಂಕಾ ಗಾಂಧಿ 5 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದು, 3.47 ಲಕ್ಷ ಮತಗಳ ಅಂತರದಿಂದ ಮುನ್ನಡೆ ಸಾಧಿಸಿ, ವಯನಾಡಿನಲ್ಲಿ ಗೆದ್ದು ಬೀಗಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸತ್ಯನ್ ಮೊಕೇರಿ 1.7 ಲಕ್ಷಕ್ಕೂ ಹೆಚ್ಚು ಮತಗಳಿಂದ ಎರಡನೇ ಸ್ಥಾನಕ್ಕೆ ಕುಸಿದರೆ, ಬಿಜೆಪಿಯ ನವ್ಯಾ ಹರಿದಾಸ್ ಸುಮಾರು 95,000 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಒಟ್ಟಾರೆ ಬಹುಮತಗಳ ಅಂತರದಿಂದ ಗೆಲುವು ಕಂಡಿರುವ ಪ್ರಿಯಾಂಕಾ ಗಾಂಧಿ, ವಯನಾಡಿನತ್ತ ಮುಖ ಮಾಡಿದ್ದಾರೆ.

2024ರ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ 3.65 ಲಕ್ಷ ಮತಗಳ ದಾಖಲೆಯನ್ನು ಮುರಿದು ತನ್ನದೇ ಹೊಸ ದಾಖಲೆ ಬರೆದಿರುವ ಪ್ರಿಯಾಂಕಾ ಗಾಂಧಿ, ಬರೋಬ್ಬರಿ 3.82 ಲಕ್ಷ ಮತಗಳ ಅಂತರದಿಂದ ಇದೀಗ ಗೆಲುವಿನ ಪತಾಕೆ ಹಾರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಸಹೋದರ ರಾಹುಲ್​ ಗಾಂಧಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಬೆನ್ನಲ್ಲೇ ತಮ್ಮ ಚೊಚ್ಚಲ ಪೈಪೋಟಿಯನ್ನು ವಯನಾಡಿನಿಂದ ಆರಂಭಿಸಿದ ಪ್ರಿಯಾಂಕಾ ಗಾಂಧಿ, ಉಪಚುನಾವಣೆ ಆರಂಭಗೊಂದ ಮೊದಲ ದಿನದಿಂದಲೂ ಜನರನ್ನು ಉದ್ದೇಶಿಸಿ, ಪ್ರಚಾರ ನಡೆಸಿದ್ದರು. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್​ ನಾಯಕಿ, ತನಗೊಂದು ಅವಕಾಶ ಕೊಡಿ ಎಂದು ವಯನಾಡು ಜನತೆಯಲ್ಲಿ ಮನವಿ ಮಾಡಿದ್ದರು. ಕಡೆಗೂ ಪ್ರಿಯಾಂಕಾ ಕೈಹಿಡಿದ ಜನರು, ಭಾರೀ ಮತಗಳನ್ನು ಕೊಡುವ ಮೂಲಕ 'ಕೈ' ನಾಯಕಿಯ ಗೆಲುವಿಗೆ ಸಾಕ್ಷಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net