ಅಪ್ರಾಪ್ತ ಬಾಲಕಿಯರ ಖಾಸಗಿ ವಿಡಿಯೋ ಚಿತ್ರೀಕರಣ: ಶಿಕ್ಷಕನ ವಿರುದ್ಧ ಪ್ರಕರಣ ರದ್ದುಗೊಳಿಸಲು ಹೈ ನಕಾರ

highcourt
Published on

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಖಾಸಗಿ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸಿದ ಆರೋಪದ ಮೇಲೆ ಶಿಕ್ಷಕರೊಬ್ಬರ ವಿರುದ್ಧ ದಾಖಲಾದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಜತೆಗೆ ಪ್ರಕರಣವನ್ನು ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದೆ.

ಈ ಕುರಿತಾಗಿ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕೋಲಾರ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ (46) ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಅರ್ಜಿದಾರರು ಯಾವುದೇ ತಪ್ಪೆಸೆಗಲಿಲ್ಲ. ಇಲ್ಲಿ ಅವರ ಮೊಬೈಲ್ ಫೋನ್ ವಶಪಡಿಸಕೊಂಡು ಸುಳ್ಳು ಅಪಾದನೆ ಮಾಡಿ ದೂರು ದಾಖಲಿಸಲಾಗಿದೆ. ಹೀಗಾಗಿ ಅವರ ವಿರುದ್ಧದ ಎಲ್ಲ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.

ಸರ್ಕಾರಿ ಪರ ವಕೀಲರು ವಾದ ಮಂಡಿಸಿ ಅರ್ಜಿದಾರರು ವಸತಿ ಶಾಲೆಯಲ್ಲಿ ಹುಡುಗಿಯರು ಬಟ್ಟೆ ಬದಲಾಯಿಸುವಾಗ ಅವರ ವಿಡಿಯೋ ಚಿತ್ರೀಕರಿಸಿ ಫೋಟೋ ತೆಗೆದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಹಲವಾರು ಮೊಬೈಲ್ ಗಳನ್ನು ಹೊಂದಿದ್ದು ತನಿಖೆಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ. ಪ್ರಕರಣ ಸಂಬಂಧ ಸಂಗ್ರಹಿಸಲಾದ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ ಎಂದು ನ್ಯಾಯಪೀಠದ ಮುಂದೆ ವಿವರಿಸಿದರು.

ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ಶಿಕ್ಷಕರಾಗಿರುವ ಅರ್ಜಿದಾರರೂ ಹೆಣ್ಣು ಮಕ್ಕಳು ಉಡುಗೆ ಬದಲಾಯಿಸುವಾಗ ಅವರ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಮತ್ತು ಚಿತ್ರಗಳನ್ನು ತೆಗೆದಿದ್ದಾರೆ ಎನ್ನುವ ಆರೋಪವೇ ಕೇಳಲು ಅಸಭ್ಯವಾಗಿದೆ. ಅಲ್ಲದೆ ಇಲ್ಲಿ ಅವರ ಬಳಿ ವಿವಿಧ ಬ್ರಾಂಡ್‌ಗಳ ಐದು ಮೊಬೈಲ್ ಫೋನ್‌ಗಳಿವೆ. ಎಲ್ಲ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಪ್ರತಿ ಮೊಬೈಲ್ ಫೋನ್‌ನಲ್ಲಿ ಸುಮಾರು 1,000 ಚಿತ್ರಗಳನ್ನು ಮತ್ತು ನೂರಾರು ವೀಡಿಯೊಗಳಿವೆ. ಶಿಕ್ಷಕನಾಗಿರುವ ಆರೋಪಿಯ ಬಳಿ ಐದು ಮೊಬೈಲ್‌ಗಳು ಏಕೆ ಇವೆ? ಅವುಗಳಲ್ಲಿನ ವಿಡಿಯೋಗಳು ಮತ್ತು ಚಿತ್ರಗಳು ಯಾವುವು ಎಂಬುದು ತನಿಖೆಯ ವಿಷಯವಾಗಿದೆ. ವಿಡಿಯೋ ಮತ್ತು ಚಿತ್ರಗಳ ಮಾಹಿತಿಯು ಸಂಪೂರ್ಣ ತನಿಖೆಯಿಂದ ಮಾತ್ರವೇ ಹೊರಬರಲು ಸಾಧ್ಯ ಎಂದು ಹೇಳಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಏನಿದು ಪ್ರಕರಣ

ಕಳೆದ ವರ್ಷ ಡಿ. 17 ರಂದು ಕೋಲಾರದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಿಲ್ಲೆಯ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕುರಿತಾಗಿ ಅರ್ಜಿದಾರರ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಅರ್ಜಿದಾರರ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ರದ್ದುಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net