ಅಪರಿಚಿತ ವಾಹನ ಡಿಕ್ಕಿ, ಖಾಸಗಿ ಕಂಪನಿ ಉದ್ಯೋಗಿ ಸಾವು

Bike Accident_2
Published on

ಬೆಂಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟಿದ್ದಾನೆ.
ಹೈಗ್ರೌಂಡ್ಸ್ ಸಂಚಾರ ಠಾಣೆ ವ್ಯಾಪ್ತಿಯ ವಕ್ಫ್ ಬೋರ್ಡ್ ಸಮೀಪ ಸೋಮವಾರ ತಡರಾತ್ರಿ ಈ ಅವಘಾತ ನಡೆದಿದೆ.
ಮಾರತ್ತಹಳ್ಳಿ ನಿವಾಸಿ ಆಯುಷ್ ಅಪ್ಪಯ್ಯ(೨೧) ಮೃತ ಉದ್ಯೋಗಿ. ಕೊಡಗು ಮೂಲದ ಆಯುಷ್ ಅಪ್ಪಯ್ಯ ಕುಟುಂಬ ಸದಸ್ಯರು ೨೦ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಮಾರತ್ತಹಳ್ಳಿಯಲ್ಲಿ ವಾಸವಾಗಿದ್ದಾರೆ. ಈತನ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿ.ಕಾಂ ಪದವಿ ಪಡೆದುಕೊಂಡಿರುವ ಆಯುಷ್ ಅಪ್ಪಯ್ಯ ಕೂಡ ವಸಂತನಗರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸೋಮವಾರ ತಡರಾತ್ರಿ ೧೦.೩೦ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಕಲ್ಪನಾ ಜಂಕ್ಷನ್ ಕಡೆಯಿಂದ ಚಂದ್ರಿಕಾ ಜಂಕ್ಷನ್ ಕಡೆಗೆ ದ್ವಿಚಕ್ರದಲ್ಲಿ ಸಾಗುತ್ತಿದ್ದ. ಆಗ ವಕ್ಫ್ ಬೋರ್ಡ್ ಬಳಿ ಬರುತ್ತಿದ್ದಂತೆ ಆಯುಷ್ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದು ಆತನ ತಲೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಆಯುಷ್ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ. ಈ ಸಂಬಂಧ ಅಪರಿಚಿತ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಚಾಲಕನಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈಗ್ರೌಂಡ್ಸ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net