ಚಿನ್ನದ ಗಣಿಗಾರಿಕೆಗೆ ಖಾಸಗಿ ಒಲವು; 6 ಕಂಪನಿಗಳಿಂದ ಹೂಡಿಕೆ ಸಾಧ್ಯತೆ, ಸರ್ಕಾರದ ಜತೆ ನಡೆದಿದೆ ಮಾತುಕತೆ

Gold F
ಚಿನ್ನದ ನಿಕ್ಷೇಪವಿದೆ ಎಂದು ಉಲ್ಲೇಖಿತವಾಗಿರುವ ಹಾಸನ ಜಿಲ್ಲೆ ಮುದುಡಿ ಗ್ರಾಮದ ನೋಟ.
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಸರ್ಕಾರ ರಾಜ್ಯದಲ್ಲಿ ಚಿನ್ನದ ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾದರೆ ಹೂಡಿಕೆ ಮಾಡಲು ಆರು ಕಂಪನಿಗಳು ಮುಂದೆ ಬರುವ ಸಾಧ್ಯತೆಗಳಿವೆ ಎಂದು ಕೈಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ. ಈ ಸಂಬಂಧ ಕೆಲ ಕಂಪನಿಗಳು ಸರ್ಕಾರದೊಂದಿಗೆ ಮಾತುಕತೆ ಸಹ ನಡೆಸಿರುವುದಾಗಿ ಹೇಳಲಾಗುತ್ತಿದೆ.

ಮುಂದಿನ ಪ್ರಕ್ರಿಯೆ?: ಕೇಂದ್ರ ಸರ್ಕಾರದ ಗಣಿ ಇಲಾಖೆ ರಾಜ್ಯಕ್ಕೆ ಅನುಮತಿ ನೀಡಿರುವುದರಿಂದ ಸರ್ಕಾರ ಟೆಂಡರ್ ಕರೆಯಲಿದೆ. ಟೆಂಡರ್ ಪಡೆಯುವ ಸಂಸ್ಥೆ ನಿಕ್ಷೇಪದ ಪ್ರಮಾಣ ಪತ್ತೆ ಹಚ್ಚಲಿದೆ. ಆ ನಂತರ ಮತ್ತೆ ಗಣಿಗಾರಿಕೆಗೆ ಟೆಂಡರ್ ಕರೆದು ಚಟುವಟಿಕೆ ಆರಂಭವಾಗುತ್ತದೆ. ಒಂದು ವೇಳೆ ಚಿನ್ನದ ನಿಕ್ಷೇಪದ ಪ್ರಮಾಣ ಹೆಚ್ಚಿಲ್ಲ ಎಂಬುದು ಗೊತ್ತಾದರೆ ಟೆಂಡರ್ ವಾಪಸ್ ಪಡೆಯುವುದಕ್ಕೂ ಅವಕಾಶ ಇರುತ್ತದೆ. ರಾಜ್ಯದ ಭೂ ವಿಜ್ಞಾನಿಗಳು ಸಹ ಪ್ರಮಾಣದ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.

ಸಿಗದ ಖಚಿತತೆ: ಒಟ್ಟು 7 ಸ್ಥಳಗಳಲ್ಲಿ ನಿಕ್ಷೇಪ ಎಷ್ಟು ಸಿಗಬಹುದೆಂಬ ಬಗ್ಗೆ ಖಚಿತತೆ ಇಲ್ಲವಾದ್ದರಿಂದ ಇನ್ನಷ್ಟು ಸಮೀಕ್ಷೆ ನಡೆಯಬೇಕಿದೆ.

ಲಾಭವೇನು?
  • ಕೇಂದ್ರ, ರಾಜ್ಯದ ಬೊಕ್ಕಸಕ್ಕೆ ಲಾಭ
  • ಸಾವಿರಾರು ಉದ್ಯೋಗ ಸೃಷ್ಟಿ
  • ಆರ್ಥಿಕ ಚಟುವಟಿಕೆಗಳು ಹೆಚ್ಚಳ

280 ಟನ್ ಚಿನ್ನದ ಅಂದಾಜು: ರಾಜ್ಯದಲ್ಲಿ 280 ಟನ್ ಚಿನ್ನ ಸಿಗಬಹುದೆಂಬ ಮಾಹಿತಿ ಹಿಂದೆ ಖಾಸಗಿ ಗಣಿಗಾರಿಕೆ ಕಂಪನಿಗಳ ಸಮೀಕ್ಷೆಯಿಂದ ಹೊರಬಿದ್ದಿತ್ತು. ಈ ಮಾಹಿತಿಯನ್ನು ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟ ಸರ್ಕಾರದ ಗಮನಕ್ಕೆ ತಂದಿತ್ತು. ಆದರೆ ಆ ಬಗ್ಗೆ ಸರ್ವೆಕ್ಷಣಾ ಸಂಸ್ಥೆ, ರಾಜ್ಯದ ಗಣಿ ಇಲಾಖೆ ಸಮೀಕ್ಷೆಯನ್ನೇನು ನಡೆಸಿಲ್ಲ.

ಭೂ ಸರ್ವೆಕ್ಷಣ ಸಂಸ್ಥೆ ಜಿ 4 ಹಂತದಲ್ಲಿ ಪರಿಶೀಲನೆ ಮಾಡಿ ಬ್ಲಾಕ್​ಗಳನ್ನು ಗುರುತಿಸಿದೆ. ಈಗ ಕಾಂಪೋಸಿಟ್ ಲೈಸನ್ಸ್ ನೀಡಲಾಗುತ್ತದೆ. ಎಷ್ಟು ಪ್ರಮಾಣದ ಚಿನ್ನ ಲಭ್ಯ ಎಂಬ ಬಗ್ಗೆ ಸಮೀಕ್ಷೆ ನಡೆಸುವುದಕ್ಕೆ ಟೆಂಡರ್ ಕರೆಯಲಿದ್ದೇವೆ.

| ಪಿ.ಎನ್. ರವೀಂದ್ರ ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ರಾಜ್ಯದ 15 ಪ್ರದೇಶಗಳಲ್ಲಿ ನಿಕ್ಷೇಪ: ಲಭ್ಯ ಮಾಹಿತಿ ಪ್ರಕಾರ ರಾಜ್ಯದ 15 ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಇರಬಹುದೆಂದು ಹೇಳಲಾಗುತ್ತಿದೆ. 8 ಜಿಲ್ಲೆಗಳಲ್ಲಿ ಖಾಸಗಿಯವರು ಹಿಂದೆ ಸಮೀಕ್ಷೆ ನಡೆಸಿದ್ದರು. ಹಾವೇರಿ, ರಾಯಚೂರು, ಯಾದಗಿರಿ, ಧಾರವಾಡ, ಚಿತ್ರದುರ್ಗ, ಗದಗ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪವಿರುವುದಾಗಿ ಹೇಳಲಾಗಿತ್ತು. ಹೊಸ ಕೈಗಾರಿಕಾ ನೀತಿ ಬಂದ ಸಂದರ್ಭದಲ್ಲಿ ಮತ್ತೊಂದು ಸಮೀಕ್ಷೆ ನಡೆಸಬೇಕಾಗಿತ್ತು. ಆದರೆ ಆ ಕೆಲಸ ಆಗಿಲ್ಲ.

ಕಬ್ಬಿಣ, ಸುಣ್ಣ: ಕಲಬುರಗಿ ಜಿಲ್ಲೆಯಲ್ಲಿ ಎರಡು ಕಡೆ ಸುಣ್ಣದ ಕಲ್ಲು (ಲೈಮ್ ಸ್ಟೋನ್) ಹಾಗೂ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಯ ಐದು ಕಡೆ ಕಬ್ಬಿಣ ಅದಿರು ಗಣಿಗಾರಿಕೆಗೆ ಬ್ಲ್ಯಾಕ್​ಗಳನ್ನು ಗುರುತಿಸಿದೆ.

ರಾಜ್ಯದಲ್ಲಿ 7 ಚಿನ್ನದ ಬ್ಲ್ಯಾಕ್​, 2 ಸುಣ್ಣದ ಕಲ್ಲಿನ ಬ್ಲಾಕ್​ಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದ್ದರಿಂದ ನಾವು ಟೆಂಡರ್​ಗೆ ಸಿದ್ಧತೆ ಮಾಡುತ್ತಿದ್ದೇವೆ. ಆದಷ್ಟು ಬೇಗ ಟೆಂಡರ್ ಕರೆದು ಮುಂದಿನ ಪ್ರಕ್ರಿಯೆ ಆರಂಭಿಸುತ್ತೇವೆ.

| ಹಾಲಪ್ಪ ಆಚಾರ್ ಗಣಿ ಮತ್ತು ಭೂ ವಿಜ್ಞಾನ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net