ಡೀಸೆಲ್ ದರ ಇಳಿಸದಿದ್ದರೆ ಖಾಸಗಿ ಬಸ್ ಮುಷ್ಕರ

pravite bus owners association r.rangappa
ಶಿವಮೊಗ್ಗ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಆರ್.ರಂಗಪ್ಪ
Published on

ಶಿವಮೊಗ್ಗ: ರಾಜ್ಯ ಸರ್ಕಾರ ಡೀಸೆಲ್ ದರ ಇಳಿಸದಿದ್ದರೆ ಅನಿವಾರ್ಯ ಖಾಸಗಿ ಬಸ್‌ಗಳ ಮುಷ್ಕರ ನಡೆಸಬೇಕಾಗುತ್ತದೆ ಎಂದು ಶಿವಮೊಗ್ಗ ಖಾಸಗಿ ಬಸ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

2024ರ ಜೂನ್‌ನಲ್ಲಿ 3 ರೂ. ಹೆಚ್ಚಿಸಿದ್ದ ಸರ್ಕಾರ ಇದೀಗ 2025ರ ಏಪ್ರಿಲ್ನಲ್ಲಿ ಪ್ರತಿ ಲೀ.ಗೆ 2.50ರಿಂದ 3 ರೂ. ಹೆಚ್ಚಿಸಲಾಗಿದೆ. ಈ ಮೂಲಕ ಖಾಸಗಿ ಸಾರಿಗೆ ಉದ್ಯಮ ನಡೆಸುತ್ತಿರುವರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ರಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕರೊನಾ, ಬರಗಾಲ ನಂತರ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮ ತತ್ತರಿಸಿದೆ. ಈ ಉದ್ಯಮ ನಂಬಿರುವ ಲಕ್ಷಾಂತರ ಕುಟುಂಬಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಜೀವನ ನಡೆಸುವುದು ಕಷ್ಟದಾಯಕವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಸಂಚರಿಸುವ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಇದರಿಂದ ಖಾಸಗಿ ಉದ್ಯಮಕ್ಕೆ ತೀವ್ರ ನಷ್ಟ ಉಂಟಾಗಿದೆ ಎಂದು ದೂರಿದ್ದಾರೆ.

ಈ ನಡುವೆ ಡೀಸೆಲ್ ದರ ಹೆಚ್ಚಿಸಿದ ಪರಿಣಾಮ ಖಾಸಗಿ ಬಸ್ ಮಾಲೀಕರಿಗೆ ಹೊರೆಯಾಗುತ್ತಿದೆ. ಅನಿವಾರ್ಯವಾಗಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಬೇಕಾಗುತ್ತದೆ. ಹಾಗಾದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗುತ್ತದೆ. ಸಾರ್ವಜನಿಕರ ಜೀವನದ ಜತೆಗೆ ಚೆಲ್ಲಾಟವಾಡದೆ ಡೀಸೆಲ್ ದರ ಕಡಿತಗೊಳಿಸಬೇಕು. ಇಲ್ಲದಿದ್ದರೆ ನಾವೂ ಅನಿವಾರ್ಯವಾಗಿ ರಾಜ್ಯ ಲಾರಿ ಮಾಲೀಕರ ಸಂಘಟನೆ (ಎಐಎಂಟಿಸಿ) ಮುಷ್ಕರಕ್ಕೆ ಬೆಂಬಲ ನೀಡಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನೀಡಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net