ಖಾಸಗಿ ಬಸ್ ನಿರ್ವಾಹಕರು, ಕ್ಲೀನರ್‌ಗಳಿಗೆ ವಿಮೆ ಅರ್ಜಿ

4 smg 1
Published on

ಶಿವಮೊಗ್ಗ: ಅಸಂಘಟಿತ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಖಾಸಗಿ ಬಸ್‌ಗಳ ನಿರ್ವಾಹಕರು ಮತ್ತು ಕ್ಲೀನರ್‌ಗಳಿಗೆ ಅಪಘಾತ ವಿಮೆ ಅರ್ಜಿಗಳನ್ನು ವಿತರಿಸಲಾಯಿತು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾಂಕೇತಿಕವಾಗಿ ಅರ್ಜಿಗಳನ್ನು ವಿತರಿಸಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಆಯನೂರು ಕುಪ್ಪೇಂದ್ರಪ್ಪ, ಅಸಂಘಟಿತ ಕ್ಷೇತ್ರವಾಗಿರುವ ಖಾಸಗಿ ಬಸ್‌ಗಳ ನಿರ್ವಾಹಕರು ಮತ್ತು ಕ್ಲೀನರ್‌ಗಳಿಗೆ ಈ ಯೋಜನೆ ಅನುಕೂಲವಾಗಲಿದೆ. ಈ ಹಿಂದೆ ಹೋಟೆಲ್ ಕಾರ್ಮಿಕರನ್ನು ಅಸಂಘಟಿತ ವಲಯದ ಕಾರ್ಮಿಕರೆಂದು ಪರಿಗಣಿಸಿರುವ ರೀತಿಯಲ್ಲೇ ಖಾಸಗಿ ಬಸ್ ನಿರ್ವಾಹಕರು ಮತ್ತು ಕ್ಲೀನರ್‌ಗಳನ್ನು ಸೇರಿಸುವ ಉದ್ದೇಶದಿಂದ ಅರ್ಜಿ ಹಂಚಲಾಗುತ್ತಿದೆ ಎಂದರು.

ಅಪಘಾತಕ್ಕೆ ಒಳಗಾದ ನಿರ್ವಾಹಕರು, ಕ್ಲೀನರ್‌ಗಳಿಗೆ ಈ ಹಿಂದೆ ಯಾವ ಪರಿಹಾರ ವಿಮೆ ಇರಲಿಲ್ಲ. ಆದರೆ ಬಸ್ ಕಾರ್ಮಿಕರು ಈ ಅರ್ಜಿ ತುಂಬಿ ಕಾರ್ಮಿಕ ಇಲಾಖೆಯಿಂದ ಕಾರ್ಡ್ ಪಡೆದಲ್ಲಿ ಅಪಘಾತದ ವೇಳೆ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ., ಗಾಯಾಳುಗಳಿಗೆ 2 ಲಕ್ಷ ರೂ.ವರೆಗೂ ಪರಿಹಾರ ಸಿಗಲಿದೆ. ಜತೆಗೆ ಮಕ್ಕಳ ಶಿಕ್ಷಣಕ್ಕೆ ಸರ್ಕಾರವೇ ಉಚಿತ ವ್ಯವಸ್ಥೆ ಕಲ್ಪಿಸಲಿದೆ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ನಿರ್ದೇಶಕ ಪಿ.ರುದ್ರೇಶ್, ಮೆಸ್ಕಾಂನ ನಿರ್ದೇಶಕ ದಿನೇಶ್, ಸಂಘಟನೆ ಜಿಲ್ಲಾ ಉಪಾಧ್ಯಕ್ಷೆ ಗೌರಿ ಶ್ರೀನಾಥ್, ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಹೊನ್ನಪ್ಪ, ನಗರ ಅಧ್ಯಕ್ಷೆ ಸುರೇಖಾ ಪಾಲಕ್ಷಪ್ಪ, ನಿಸ್ಮಾ, ಮಂಜುನಾಥ್, ವಿಕಾಸ್, ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net