

ಶ್ರೀನಿವಾಸಪುರ/ರಾಯಲ್ಪಾಡು: ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಕ್ರಾಸ್ ಸಮೀಪ ಭಾನುವಾರ ರಾತ್ರಿ ಖಾಸಗಿ ಬಸ್ ಕಂದಕಕ್ಕೆ ಉರುಳಿ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದು, 39 ಮಂದಿಗೆ ಗಂಭೀರ ಗಾಯಗಳಾಗಿವೆ.
ಆಂಧ್ರದ ಕನಿಗಿರಿ ನಗರದ ನಿವಾಸಿ ಅನಿಲ್ರೆಡ್ಡಿ (23) ಮೃತ.
ಬೆಂಗಳೂರಿನಿಂದ ಆಂಧ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ 40 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಮೃತ ಅನಿಲ್ರೆಡ್ಡಿ ಮೃತದೇಹವನ್ನು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಅನಿಲ್ಕುಮಾರ್ ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ ಮನೆಗೆ ಹಿಂತಿರುಗುತ್ತಿದ್ದ ಎನ್ನಲಾಗಿದೆ.
39 ಗಾಯಾಳುಗಳನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರವಿಶಂಕರ್, ಡಿವೈಎಸ್ಪಿ ನಂದಕುಮಾರ್, ಸಿಪಿಐ ಶಿವಕುಮಾರ್, ರಾಯಲ್ಪಾಡು ಪಿಎಸ್ಐ ಯೋಗೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಯಲ್ಪಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.