

ನಿನ್ನೆಯ ಪಾಠದಿಂದ ನಾಳೆಯ ಭರವಸೆಯ ದಿನಗಳನ್ನು ತಲುಪುತ್ತೇವೆಂಬ ಆತ್ಮವಿಶ್ವಾಸವಿದ್ದರೆ ಎಲ್ಲವೂ ಸಾಧ್ಯ ಎನ್ನುವ ಪೃಥ್ವಿರಾಜ್.ಕೆ.ಎಸ್.ಬಿ 2022ರ ಭಾರತೀಯ ಅರಣ್ಯ ಸೇವಾ ಪರೀಕ್ಷೆಯ 57ನೇ ರ್ಯಾಂಕ್ ಹೋಲ್ಡರ್.
ದಾವಣಗೆರೆಯ ಚೆನ್ನಗಿರಿ ತಾಲೂಕಿನ ಶೆಟ್ಟಿಹಳ್ಳಿ ನಿವಾಸಿಯಾದ ಕೆ.ಎಸ್.ಬಸವರಾಜಪ್ಪ ಹಾಗೂ ಸುಧಾ.ಜಿ.ಟಿ ಅವರ ಹಿರಿಯ ಮಗ ಪೃಥ್ವಿರಾಜ್.ಕೆ.ಎಸ್.ಬಿ, ತಮ್ಮ ಶಾಲಾ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ದಾವಣಗೆರೆಯ ಅನುಭವ ಮಂಟಪದಲ್ಲಿ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನ ಜೆಎಸ್ಎಸ್ ಅಕಾಡೆಮಿ ಆ್ ಟೆಕ್ನಿಕಲ್ ಎಜುಕೇಷನ್ ವಿದ್ಯಾಸಂಸ್ಥೆಯಿಂದ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ತೇರ್ಗಡೆ ಹೊಂದಿದ್ದಾರೆ.
ಸ್ಪರ್ಧಾ ಪರೀಕ್ಷೆಯೆಡೆಗೆ ಒಲವು: ಬಾಲ್ಯದಿಂದ ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡಿದ್ದ ಪೃಥ್ವಿರಾಜ್, ತಮ್ಮ ಊರಿನಿಂದ ಅಧಿಕಾರಿಗಳಾಗಿ ಆಯ್ಕೆಯಾಗುವವರನ್ನು ಕಂಡು ಸ್ಫೂರ್ತಿಗೊಳ್ಳುತ್ತಿದ್ದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು, ನಾಗರಿಕ ಸೇವಕನಾಗಬೇಕೆಂದು ಬಾಲ್ಯದಲ್ಲಿ ಮೊಳಕೆಯೊಡೆದಿದ್ದ ಕನಸು, ಕಾಲೇಜು ಮೆಟ್ಟಿಲು ಹತ್ತುವ ವೇಳೆಗೆ ಹೆಮ್ಮರವಾಗಿ ಬೆಳೆದು, ಸ್ಪಷ್ಟ ರೂಪ ಪಡೆದುಕೊಂಡಿತ್ತು.
2018ರಲ್ಲಿ ಪದವಿ ಪೂರ್ಣಗೊಳಿಸಿ, ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದ ಪೃಥ್ವಿರಾಜ್, 2019ರಲ್ಲಿ ನಾಗರಿಕ ಪರೀಕ್ಷೆ ಮೊದಲ ಬಾರಿಗೆ ಬರೆದಿದ್ದರು. ನಂತರ ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಬಗ್ಗೆ ಮಾಹಿತಿ ಪಡೆದು, 2021ರಲ್ಲಿ ಐಎಫ್ ಎಸ್ ಪರೀಕ್ಷೆ ಎದುರಿಸಿದ್ದರು. ಕೆಲವು ಅಂಕಗಳಿಂದ ನಾಪಾಸ್ ಆದ ಬಳಿಕ, 2022ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ನಿರ್ಧರಿಸಿದರು. ಅದರಂತೆಯೇ ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಹಂತವನ್ನು ಯಶಸ್ವಿಯಾಗಿ ತೇರ್ಗಡೆಯಾಗುವುದರೊಂದಿಗೆ ಆಲ್ ಇಂಡಿಯಾ ರ್ಯಾಂಕಿಗ್ ಪಟ್ಟಿಯಲ್ಲಿ 57ನೇ ಸ್ಥಾನ ಪಡೆದು, ಇಂದು ಐಎಫ್ ಎಸ್ ಆಫೀಸರ್ ಸ್ಥಾನ ಅಲಂಕರಿಸಿದ್ದಾರೆ.
ಐಎಫ್ ಎಸ್ ಪರೀಕ್ಷೆ ರೂಪುರೇಷೆ: ನಾಗರಿಕ ಸೇವಾ ಪರೀಕ್ಷೆಗಳಾದ ಐಎಎಸ್,ಐಪಿಎಸ್ಗೆ ನೀಡುವ ಪ್ರಶ್ನೆಪತ್ರಿಕೆಯನ್ನೇ ಪ್ರಿಲಿಮ್ಸ್ ಹಂತದಲ್ಲಿ ಎದುರಿಸಬೇಕಾಗಿರುತ್ತದೆ. ಆದರೆ, ಐಎಪ್ ಎಸ್ ಮುಖ್ಯ ಪರೀಕ್ಷೆ ಬರೆಯಬೇಕೆಂದರೆ ಪ್ರಿಲಿಮ್ಸ್ನಲ್ಲಿ, ನಾಗರಿಕ ಸೇವಾ ಪರೀಕ್ಷೆಗಳಿಗಿಂತ 15 ಅಂಕ ಹೆಚ್ಚು ಪಡೆದಿರಬೇಕು. ಐಎಪ್ಎಸ್ ಮುಖ್ಯ ಪರೀಕ್ಷೆಯಲ್ಲಿ ಭಿನ್ನವಾದ 2 ಐಚ್ಛಿಕ ಪ್ರಶ್ನೆ ಪತ್ರಿಕೆ(ತಲಾ 4 ಪ್ರಶ್ನೆ ಪತ್ರಿಕೆ), 1 ಸಾಮಾನ್ಯ ಇಂಗ್ಲಿಷ್ ಪತ್ರಿಕೆ ಮತ್ತೊಂದು ಸಾಮನ್ಯ ಜ್ಞಾನ ಪತ್ರಿಕೆಯನ್ನು ಒಳಗೊಂಡಿದ್ದು, 1400 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
ಐಎಫ್ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಇಂದಿರಾಗಾಂಧಿ ನ್ಯಾಷನಲ್ ಫಾರೆಸ್ಟ್ ಅಕಾಡೆಮಿ(ಐಜಿಎನ್ಎಫ್ ಎ) ಡೆಹ್ರಾಡೂನ್ನಲ್ಲಿ 1.5 ವರ್ಷಗಳ ತರಬೇತಿ ನೀಡಲಾಗುತ್ತದೆ. ತರಬೇತಿ ವೇಳೆ ಲಡಾಖ್, ರಾಜಸ್ಥಾನ್, ಪಶ್ಚಿಮ ಟ, ಅರವಳ್ಳಿ ಸೇರಿದಂತೆ ದೇಶದಲ್ಲಿನ ವಿವಿಧ ಅರಣ್ಯ ಪ್ರದೇಶಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗುವುದು.
ಸ್ಪರ್ಧಾ ಪರೀಕ್ಷೆ ತಯಾರಿ ಎಂಬುದು ಕೇವಲ ಟ್ರೆಂಡ್ ಆಗಬಾರದು. ಪರೀಕ್ಷೆ ತೆಗೆದುಕೊಳ್ಳಲು ನಾವು ಸಮರ್ಥರೆ? ಅದಕ್ಕೆ ಬದ್ಧವಾಗಿರುತ್ತೇವೆಯೇ ? ಎಂಬುದನ್ನು ಮೊದಲು ಮನದಟ್ಟು ಮಾಡಿಕೊಳ್ಳಬೇಕು. ಒಮ್ಮೆ ಗುರಿ ಸ್ಪಷ್ಟವಾದ ನಂತರ ಹಿಂದೆ ಸರಿಯದೆ, ಗುರಿ ತಲುಪಲು ಶತಾಯಗತಾಯ ಪ್ರಯತ್ನಿಸಲೇ ಬೇಕು. ಏನೆಲ್ಲಾ ಓದಬೇಕು ಎಂಬುದಕ್ಕಿಂತ ಹೆಚ್ಚಾಗಿ, ಯಾವುದೆಲ್ಲಾ ಅನಗತ್ಯ ಎಂಬುದರ ಸ್ಪಷ್ಟತೆ ಇರಬೇಕು ಎಂಬುದು ಪೃಥ್ವಿರಾಜ್ ಅವರ ಅಭಿಪ್ರಾಯ.
ಪ್ರಾರಂಭಿಕ ಕೆಲವು ತಿಂಗಳು ಇನ್ಸೈಟ್ ಐಅಖ ಅಕಾಡೆಮಿಯಲ್ಲಿ ಯುಪಿಎಸ್ಸಿಯ ಪೌಂಡೇಶನ್ ಕೋರ್ಸ್ಗೆ ದಾಖಲಾಗಿದ್ದೆ. ನಂತರ ಸ್ವಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿ, ಸಂಪೂರ್ಣ ಗಮನವನ್ನು ಓದಿನೆಡೆಗೆ ಹರಿಸಿದ್ದೆ. ಪ್ರತಿದಿನ ಸರಿಸುಮಾರು 10ರಿಂದ 12 ಗಂಟೆ ವಿರಾಮ ಸಹಿತ ಓದಲು ಸಮಯ ನಿಗದಿಪಡಿಸಿ, ಅದನ್ನು ಅನುಸರಿಸುತ್ತಿದ್ದೆ ಎಂದು ತಮ್ಮ ಯಶನ್ಸಿನ ಹಾದಿಯ ಕುರಿತು ಮಾತನಾಡಿದ್ದಾರೆ.