

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಮಾರಿ ಜಗಳ ನಿಂತಿಲ್ಲ. ಕೈದಿಗಳ ನಡುವೆ ಬಡಿದಾಟಗಳು ಮುಂದುವರಿದಿದ್ದು, 3 ದಿನಗಳಲ್ಲಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಆ.18ರ ಮಧ್ಯಾಹ್ನ 3.25ರಲ್ಲಿ ಬ್ಯಾರಕ್ 1ರ ಮೆಟ್ಟಲುಗಳ ಮೇಲೆ ಕುಳಿತಿದ್ದ ವಿಚಾರಣಾಧಿ ಬಂದಿ ಮುಜಾಹಿರ್ ಎಂಬಾತನಿಗೆ ಮತ್ತೊಬ್ಬ ವಿಚಾರಣಾಧಿನ ಕೈದಿ ಮೊಹಮ್ಮದ್ ರ್ಇಾನ್, ಕಾಲು ತಾಗಿಸಿಕೊಂಡು ಹೋಗಿದ್ದ. ಅಷ್ಟಕ್ಕೆ ಕೆರಳಿದ ಮುಜಾಹಿದ್, ಜಗಳ ತೆಗೆದು ಚೂಪಾದ ವಸ್ತುವಿನಿಂದ ಮೊಹಮ್ಮದ್ ರ್ಇಾನ್ ಎದೆಯ ಎಡ ಭಾಗಕ್ಕೆ ಹಲ್ಲೆ ಮಾಡಿದ್ದಾನೆ. ಕೂಡಲೇ ಜೈಲು ಸಿಬ್ಬಂದಿ ಇಬ್ಬರನ್ನು ಬಿಡಿಸಿ ಗಾಯಾಳುನನ್ನು ಜೈಲು ಆಸ್ಪತ್ರೆಗೆ ದಾಖಲಿಸಿದ್ದರು. ಆರೋಪಿ ಮುಜಾಹಿರ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಜೈಲು ಅಧಿಕಾರಿಗಳು ದೂರು ಸಲ್ಲಿಸಿ ಪ್ರಕರಣ ದಾಖಲಿಸಿದ್ದಾರೆ.
ಇದಾದ ಮೇಲೆ ಆ.16ರಂದು ವಿಚಾರಣಾಧಿನ ಕೈದಿಗಳಾದ ಪವನ್ ಅಲಿಯಾಸ್ ಪುಲಿ, ಚಂದ್ರ ಅಲಿಯಾಸ್ ತೇಲಮಂಗಲ ಚಂದ್ರ, ನಟರಾಜು, ಆನಂದಕುಮಾರ್ ಸೇರಿಕೊಂಡು ಸ್ಟೀಲ್ ತಟ್ಟೆಯನ್ನು ಆಯ್ದು ಮಾಡಿಕೊಂಡು ಜೈಲು ಆಸ್ಪತ್ರೆಯ ಕೆಳಭಾಗದ ಕೊಠಡಿಯಲ್ಲಿ ಇದ್ದ ಕೈದಿ ಮುಂಜೂರ ಅಲಿಯಾಸ್ ಮನ್ಸೂರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆಯೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.