ಈತನ ಪತ್ತೆಗೆ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ!

Ramesh
Published on

ವಿಜಯಪುರ: ಪೊಲೀಸ್ ಇಲಾಖೆಯಲ್ಲಿ ಕ್ಲಿಷ್ಟ ಪ್ರಕರಣಗಳನ್ನು ಭೇದಿಸಿದ ಪೊಲೀಸರಿಗೆ ನಗದು ಬಹುಮಾನ ಕೊಡುವುದುಂಟು. ಕೆಲವೊಮ್ಮೆ ಖತರ್ನಾಕ್ ಅಪರಾಧಿ/ಆರೋಪಿಗಳ ಸುಳಿವು ಕೊಟ್ಟವರಿಗೂ ನಗದು ಬಹುಮಾನ ನೀಡುವುದುಂಟು. ಅದೇ ರೀತಿ ಪೊಲೀಸ್ ಇಲಾಖೆಯಿಂದ ಭಾರಿ ಮೊತ್ತದ ನಗದು ಬಹುಮಾನವೊಂದು ಘೋಷಣೆಯಾಗಿದೆ.

ವಿಜಯಪುರ ಜಿಲ್ಲಾ ಪೊಲೀಸರು ಈ ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಪರೋಲ್ ಮೇಲೆ ಹೊರಬಂದು ಪರಾರಿಯಾಗಿ ತಲೆಮರೆಸಿಕೊಂಡಿರುವ ಕೈದಿಯೊಬ್ಬನ ಪತ್ತೆಗಾಗಿ ಈ ನಗದು ಬಹುಮಾನ ಘೋಷಣೆ ಮಾಡಲಾಗಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮುದ್ನಾಳ ಗ್ರಾಮದ ರಮೇಶ ಯಮನಪ್ಪ ಪರಪ್ಪಗೋಳ ಎಂಬಾತ ಪರೋಲ್ ಮೇಲೆ ಹೊರಬಂದಿದ್ದು, ಕೇಂದ್ರ ಕಾರಾಗೃಹಕ್ಕೆ ಹೋಗಿ ಶರಣಾಗದತೆ ತಲೆಮರೆಸಿಕೊಂಡಿದ್ದಾನೆ. ಈತನ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ ಎಂದು ವಿಜಯಪುರ ಎಸ್​​ಪಿ ಎಚ್‌.ಡಿ.ಆನಂದಕುಮಾರ ಘೋಷಣೆ ಮಾಡಿದ್ದಾರೆ.

ಕೈದಿಯ ಸುಳಿವು ಪತ್ತೆಯಾದಲ್ಲಿ ಎಸ್​ಪಿ (9480804201) ಅವರಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ (08352- 250948)ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net