ಭೈರವೈಕ್ಯ ಶ್ರೀಗಳ ಆಶಯದಂತೆ ಬಡವರ ಸೇವೆಗೆ ಆದ್ಯತೆ

ನಾಗಮಂಗಲ ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಎಸ್.ರವಿಕುಮಾರ್, ಡಾ.ಎನ್.ಕೆ.ವೆಂಕಟರಮಣ ಇತರರಿದ್ದರು.
ನಾಗಮಂಗಲ ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಎಸ್.ರವಿಕುಮಾರ್, ಡಾ.ಎನ್.ಕೆ.ವೆಂಕಟರಮಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ
ನಾಗಮಂಗಲ : ಗ್ರಾಮೀಣ ಭಾಗದಲ್ಲಿ ಸೀಳು ತುಟಿ, ಸುಟ್ಟ ಗಾಯಗಳಂತಹ ಅನೇಕ ವಿರೂಪಗಳಿಗೆ ಚಿಕಿತ್ಸೆ ನೀಡುವ ಮೂಲಕ ನೊಂದ ತಾಯಂದಿರು ಹಾಗೂ ಮಕ್ಕಳ ಮುಖದಲ್ಲಿ ನಗು ತರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ರೋಟಾಪ್ಲಾಸ್ಟ್ ಇಂಟರ್‌ನ್ಯಾಷನಲ್ (ಅಮೆರಿಕ) ಮತ್ತು ರೋಟರಿ ಬೆಂಗಳೂರು ನಾರ್ತ್, ಜಿಲ್ಲಾ 3192 ರ ಸಹಯೋಗದಲ್ಲಿ ತಾಲೂಕಿನ ಬಿ.ಜಿ.ನಗರದಲ್ಲಿರುವ ಅದಿಚುಂಚನಗಿರಿ ವಿಶ್ವವಿದ್ಯಾಲಯದ ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ಸಂಕಲ್ಪ-2025 ಉಚಿತ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶಯದಂತೆ ಗ್ರಾಮೀಣ ಭಾಗದ ಬಡ ಜನರ ಸೇವೆಗೆ ಆದ್ಯತೆ ನೀಡಲಾಗುತ್ತಿದೆ. ಆದಿಚುಂಚನಗಿರಿ ಆಸ್ಪತ್ರೆ ರೋಟೋಪ್ಲಾಸ್ಟ್ ಜತೆಗೂಡಿ ಅನೇಕ ಜನೋಪಯೋಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾರ್ಥಕತೆಯತ್ತ ಸಾಗುತ್ತಿದೆ ಎಂದರು.
ಖಾಸಗಿ ವಾಹಿನಿಯ ಸಿಇಒ ಎಸ್.ರವಿಕುಮಾರ್ ಮಾತನಾಡಿ, ಶ್ರೀ ಮಠ ಹಾಗೂ ಸ್ವಾಮೀಜಿಗಳು ಬಡವರ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಬೆಂಗಳೂರು ಬ್ರೈನ್ ಹಾಸ್ಪಿಟಲ್ ನ ನ್ಯೂರೋಸರ್ಜನ್ ಡಾ.ಎನ್.ಕೆ.ವೆಂಕಟರಮಣ ಮಾತನಾಡಿ, ಶ್ರೀ ಮಠದ ಗುರಿ ಮತ್ತು ದೃಷ್ಟಿಕೋನ ಉದಾತ್ತವಾದುದು. ಸರ್ಕಾರ ಮಾಡಲಾಗದ ಸೇವೆಗಳನ್ನು ಮಾಡುವ ಮೂಲಕ ಶ್ರೀಮಠವು ಅನನ್ಯ ಸೇವೆ ಸಲ್ಲಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಿಬಿರದಲ್ಲಿ 42 ಮಕ್ಕಳು ವಿವಿಧ ರೀತಿಯ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಂಡರು. ಯುಎಸ್‌ಎ ರೋಟೋ ಪ್ಲಾಸ್ಟ್ ಇಂಟರ್ ನ್ಯಾಷನಲ್ ಮಿಷನ್ ಡೈರೆಕ್ಟರ್ ಥಾಮಸ್ ಕೆನ್ನೆತ್ ಫಾಕ್ಸ್, ವೈದ್ಯಕೀಯ ನಿರ್ದೇಶಕ ಡಾ.ಗ್ಯಾರಿ ಡೇವಿಡ್, ರೋಟೋಪ್ಲಾಸ್ಟ್ ಇಂಟರ್ ನ್ಯಾಷನಲ್‌ನ ಡಿಸ್ಟ್ರಿಕ್ಟ್ ಗವರ್ನರ್ ಪ್ರೊ.ಎಲಿಜಬೆತ್ ಚೆರಿಯನ್, ಸತ್ಕೀರ್ತಿನಾಥ ಸ್ವಾಮೀಜಿ, ಎಸಿಯು ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ, ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಆದಿಚುಂಚನಗಿರಿ ಆಸ್ಪತ್ರೆ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net