

ಹಾವೇರಿ: ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅತ್ಯಗತ್ಯವಾಗಿರುವ ಕೊಠಡಿಗಳನ್ನು ಕಟ್ಟಿಸಿಕೊಡಿ ಎಂದು ಪ್ರಜಾಸತ್ತಾತ್ಮಕ ಹಿನ್ನಲೆಯಲ್ಲಿ ಧ್ವನಿ ಎತ್ತಿದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಮಾನತು ಮಾಡಿರುವುದು ತೀವ್ರ ಖಂಡನೀಯವಾಗಿದ್ದು, ಕೂಡಲೇ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಹಾವೇರಿಯ ಪ್ರಗತಿಪರ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದಿಂದ ಶನಿವಾರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಿಕ್ಷಕ ವೀರಣ್ಣ ಮಡಿವಾಳರ ತಮ್ಮ ಶಾಲೆಯ ಬಗ್ಗೆ ಅನನ್ಯ ಪ್ರೀತಿ ಇಟ್ಟುಕೊಂಡು ಕಳೆದ 10 ವರ್ಷಗಳಿಂದ ಶಾಲೆಯ ಅಭಿವೃದ್ಧಿಗಾಗಿ ಹಗಲಿರುಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ದಾನಿಗಳನ್ನು ಹುಡುಕಿ ಅವರ ನೆರವಿನಿಂದ ಸರ್ಕಾರಿ ಶಾಲೆಯನ್ನು ಹೈಟೆಕ್ ಆಗಿ ಪರಿವತಿರ್ಸಿಸಿರುವುದರಿಂದ ಶಾಲೆಯ ಮಕ್ಕಳ ದಾಖಲಾತಿಯು ದಾಖಲೆ ಪ್ರಮಾಣದಲ್ಲಿ ಹೆಚ್ಚಿದೆ, ಇದರ ಹಿಂದಿನ ಪರಿಶ್ರಮ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರದು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಶಿಕ್ಷಕ ವೀರಣ್ಣ ಮಡಿವಾಳರ ಅವರು ಪರಿಶ್ರಮವಹಿಸಿ ಶಾಲೆಯನ್ನು ಅಭಿವೃದ್ಧಿಪಡಿಸಿ ಶಾಲೆಗೆ ಹಲವು ಪ್ರಶಸ್ತಿ ಬರಲು ಕಾರಣರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ 70 ವಿದ್ಯಾಥಿರ್ಗಳಿದ್ದಾಗ ಎರಡು ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿತ್ತು. ಈಗ ವಿದ್ಯಾಥಿರ್ಗಳ ಸಂಖ್ಯೆ ಅದರ ಎರಡು ಪಟ್ಟಿಗಿಂತಲೂ ಅಧಿಕವಾಗಿದೆ. ಅದಕ್ಕಾಗಿ ಅತ್ಯಗತ್ಯವಾಗಿರುವ ನಾಲ್ಕು ಕೊಠಡಿಗಳನ್ನು ಕಟ್ಟಿಸಿಕೊಡುವಂತೆ ಮುಖ್ಯ ಶಿಕ್ಷಕರಾಗಿರುವ ವೀರಣ್ಣ ಅವರು ಹಲವು ವರ್ಷಗಳಿಂದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದರೂ ಕೊಠಡಿ ನಿಮಿರ್ಸದಿರುವುದು ದುರಂತ.
ಸರ್ಕಾರವು ಇಷ್ಟರೊಳಗೆ ಈ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ನಾಲ್ಕು ಕೊಠಡಿಗಳನ್ನು ನಿಮಿರ್ಸಬೇಕಿತ್ತು. ಅದರ ಬದಲಾಗಿ ಕೊಠಡಿ ಮಂಜೂರು ಮಾಡಿ ಎಂದು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಧ್ವನಿ ಎತ್ತಿದ್ದನ್ನೇ ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ವೀರಣ್ಣ ಮಡಿವಾಳರ ಅವರನ್ನು ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ. ಇದು ಶಿಕ್ಷಣಾಧಿಕಾರಿಯ ಸರ್ವಾಧಿಕಾರಿ ಧೋರಣೆಯಾಗಿದ್ದು ಸರ್ಕಾರ ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ಜೀವಪರ ಕಳಕಳಿಯ ಶಿಕ್ಷಕ ವೀರಣ್ಣ ಅವರನ್ನು ಅಪರಾಧಿ ರೀತಿ ನೋಡಿ, ಅಮಾನತು ಮಾಡಿರುವುದನ್ನು ಸಹಿಸಲಾಗದು. ಕೂಡಲೇ ವೀರಣ್ಣ ಮಡಿವಾಳರ ಮೇಲಿನ ಅಮಾನತು ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. ಹಾಗೂ ಅಮಾನತು ಮಾಡಿರುವ ಶಿಕ್ಷಣಾಧಿಕಾರಿಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಟನೆಯ ಕಾರ್ಯದಶಿರ್ ಬಸವರಾಜ ಪೂಜಾರ, ಹಿರಿಯ ಸಾಹಿತಿಗಳಾದ ಸತೀಶ ಕುಲಕಣಿರ್, ನಿವೃತ್ತ ಡಿಡಿಪಿಯು ಅಧಿಕಾರಿಗಳಾದ ಎಂ. ಆಂಜನೇಯ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಉಡಚಪ್ಪ ಮಾಳಗಿ, ಅಖಿಲ ಭಾರತ ವಕೀಲರ ಒಕ್ಕೂಟದ ಮುಖಂಡರಾದ ನಾರಾಯಣ ಕಾಳೆ, ರೈತ ಸಂಘಟನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಸುರೇಶ ಛಲವಾದಿ, ಖಲಂದರ್ ಅಲ್ಲಿಗೌಡ್ರ, ರಮೇಶ ತಳವಾರ, ಶರಣು ಸಂಗನಾಳ, ಜಗದೀಶ ಹರಿಜನ ಮತ್ತಿತರರು ಉಪಸ್ಥಿತರಿದ್ದರು.