

ನವದೆಹಲಿ: ಹಿಂದುಗಳ ಹೊಸವರ್ಷ ಯುಗಾದಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶುಭಾಶಯ ಕೋರಿದ್ದಾರೆ. ಈ ಯುಗಾದಿಯನ್ನು ದೇಶದ ವಿವಿಧ ಭಾಗಗಳಲ್ಲಿ ಬೇರೆಬೇರೆ ಹೆಸರುಗಳಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ಗುಡಿ ಪಡ್ವಾ, ನವ್ರೇಹ್, ಸಜಿಬು, ಚಿರೋಬಾ ಮತ್ತಿತರ ಹೆಸರುಗಳಿಂದ ಹೊಸವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.
ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾ.24ರ ರಾತ್ರಿ 12ಗಂಟೆಯಿಂದಲೇ ಇಡೀ ಭಾರತ ಲಾಕ್ಡೌನ್ ಆಗಿದೆ. ಹಾಗಾಗಿ ಪ್ರತಿವರ್ಷದಷ್ಟು ಸಂಭ್ರಮದಿಂದ ಯುಗಾದಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ದೇಶದ ಎಲ್ಲರಿಗೂ ಯುಗಾದಿ ಶುಭಾಶಯ ಕೋರಿದ್ದಾರೆ.
ದೇಶದಾದ್ಯಂತ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಹೊಸವರ್ಷ ಪ್ರಾರಂಭವಾಗಿದೆ. ಈ ಹಬ್ಬಗಳು ದೇಶದ ಎಲ್ಲ ಜನರಿಗೆ ಆರೋಗ್ಯ, ಸಂತೋಷ, ಸಂಪತ್ತನ್ನು ನೀಡಲಿ ಎಂದು ಮೋದಿ ಹೇಳಿದ್ದಾರೆ.
ಇಂದಿನಿಂದ ನವರಾತ್ರಿ ಪ್ರಾರಂಭವಾಗಿದೆ. ಮಾರಕ ಕಾಯಿಲೆ ಕರೊನಾ ವಿರುದ್ಧ ಹೋರಾಡುತ್ತ ರೋಗಿಗಳಿಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್ಗಳು, ನಾಗರಿಕರ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಪೊಲೀಸರು, ಮಾಧ್ಯಮ ಸಿಬ್ಬಂದಿಗಳ ಆರೋಗ್ಯಕ್ಕಾಗಿ, ಯಶಸ್ಸಿಗಾಗಿ ನಾನು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಆಯಾ ರಾಜ್ಯಗಳಲ್ಲಿ ಯಾವ ಹೆಸರಿನಿಂದ ಆಚರಿಸುತ್ತಾರೋ ಅದೇ ಹೆಸರನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಕರ್ನಾಟಕದ ಜನರಿಗೆ ಕನ್ನಡದಲ್ಲಿಯೇ ಯುಗಾದಿಯ ಶುಭಾಶಯ ತಿಳಿಸಿದ್ದಾರೆ.
ಯುಗಾದಿ ಹೊಸವರ್ಷ ಬಂದಿದೆ. ಈ ವರ್ಷ ಆಕಾಂಕ್ಷೆಗಳೆಲ್ಲ ಈಡೇರಲಿ. ವಿಪತ್ತುಗಳಿಂದ ಹೊರಬರಲು ಹೊಸ ಚೈತನ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರಿಗೂ ಸಂತಸ ಮತ್ತು ಅದಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯವನ್ನು ನೀಡಿ ದೇವರು ಆಶೀರ್ವಾದ ಮಾಡಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.