

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಫೆ.16ರಂದು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ವಾರಾಣಸಿಗೆ ಒಂದು ದಿನದ ಮಟ್ಟಿಗೆ ಭೇಟಿ ನೀಡಿದ್ದ ಮೋದಿ ತನಗೆ ತನ್ನ ಮಗಳ ಮದುವೆಗೆ ಬನ್ನಿ ಎಂದು ಆಮಂತ್ರಣ ನೀಡಿದ್ದ ಸೈಕಲ್ ರಿಕ್ಷಾ ಚಾಲಕನನ್ನು ಭೇಟಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ದತ್ತು ಪಡೆದ ದೊಮ್ರಿ ಗ್ರಾಮದ ನಿವಾಸಿ ಮಂಗಲ್ ಕೇವತ್ ತಮ್ಮ ಮಗಳ ಮದುವೆಯ ಮೊದಲ ಆಮಂತ್ರಣ ಪತ್ರವನ್ನು ಫೆ.8ರಂದು ಪ್ರಧಾನಿ ಕಚೇರಿಗೆ ಕೊಟ್ಟು ಬಂದಿದ್ದರು. ಅದಕ್ಕೆ ಪ್ರಧಾನಿಯವರು ಫೆ.12ರಂದು ಅಭಿನಂದನಾ ಪತ್ರವನ್ನು ಕಳುಹಿಸಿಕೊಟ್ಟಿದ್ದರು. ಪ್ರಧಾನಿಯು ಫೆ.16ರಂದು ವಾರಾಣಸಿಗೆ ಬಂದ ಸಮಯದಲ್ಲಿ ಮಂಗಲ್ ಕೇವತ್ರನ್ನು ಭೇಟಿ ಮಾಡಿ ಕುಟುಂಬದ ಯೋಗಕ್ಷೇಮವನ್ನು ವಿಚಾರಿಸಿ ಬಂದಿದ್ದಾರೆ.
ಮಂಗಲ್ ಕೇವತ್ನ ಬಗ್ಗೆ ಪ್ರಧಾನಿ ಇಷ್ಟೊಂದು ಕಾಳಜಿ ತೋರುವುದಕ್ಕೆ ಒಂದು ಕಾರಣವಿದೆ. ಪ್ರಧಾನಿ ಮೋದಿ ನಡೆಸಿದ ಗಂಗಾ ಸ್ವಚ್ಛತಾ ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದುಕೊಂಡ ಮಂಗಲ್ ತನ್ನ ಊರಿನಲ್ಲಿ ಹರಿಯುವ ಗಂಗಾ ನದಿಯನ್ನು ಸ್ವತಃ ತಾನೇ ಮುಂದೆ ನಿಂತು ಸ್ವಚ್ಛ ಮಾಡಿದ್ದ. ಈ ವಿಚಾರ ಪ್ರಧಾನಿಯವರೆಗೂ ತಲುಪಿತ್ತು. (ಏಜೆನ್ಸೀಸ್)