ಪ್ರಧಾನಿ ಮೋದಿ ಜನ್ಮದಿನಾಚರಣೆ ಸಮಾಜಮುಖಿ: ಶಾಸಕ ಕೆ.ಎಸ್.ಈಶ್ವರಪ್ಪ

17 smg 1a
Published on

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ರಕ್ತದಾನದ ಮೂಲಕ ಸಮಾಜಮುಖಿಯಾಗಿ ಆಚರಿಸಿ ಹತ್ತಾರು ಜೀವ ಉಳಿಸುವಂತಹ ಮಹಾನ್ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನರೇಂದ್ರ ಮೋದಿ ಅವರ 72ನೇ ಜನ್ಮದಿನಾಚರಣೆ ಅಂಗವಾಗಿ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ಅವರ ಜನ್ಮದಿನವನ್ನು ವೈಭವಯುತವಾಗಿ ಆಚರಿಸದೇ ಸಮಾಜ ಸೇವೆ ಮಾಡುವ ಮೂಲಕ ಮಾದರಿ ಕಾರ್ಯ ಮಾಡಲಾಗುತ್ತಿದೆ ಎಂದರು.

ಕೋಟಿ ಕೋಟಿ ರೂ. ಖರ್ಚು ಮಾಡಿ ಮೋದಿ ಅವರ ಜನ್ಮದಿನ ಆಚರಿಸಬಹುದಾಗಿತ್ತು. ಆದರೆ ಆ ರೀತಿ ಮಾಡುವುದಕ್ಕೆ ಅರ್ಥವಿಲ್ಲವೆಂದು ಭಾವಿಸಿ ಬಡವರಿಗೆ, ಆರ್ಥಿಕ ದುರ್ಬಲರಿಗೆ ಅನುಕೂಲವಾಗುವ ಉದ್ದೇಶದಿಂದ ಸೇವಾ ಪಾಕ್ಷಿಕ ನಡೆಸಲಾಗುತ್ತಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ 75 ಕೋಟಿ ರೂ. ಖರ್ಚು ಮಾಡಿ ಜನ್ಮದಿನ ಆಚರಿಸಿಕೊಂಡಿದ್ದರು. ವಿಶ್ವ ನಾಯಕರಾಗಿರುವ ಮೋದಿ ಕೂಡ ಜನ್ಮದಿನವನ್ನು ವೈಭವದಿಂದ ಆಚರಿಸಬಹುದಿತ್ತು. ಆದರೆ ಅವರ ಜನ್ಮದಿನವನ್ನು ಆಡಂಬರವನ್ನಾಗಿಸದೇ ಬಡವರಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ಮಾಡಲಾಗುತ್ತಿದೆ. ಜನಸೇವೆ ಬಿಜೆಪಿಯ ಪ್ರಥಮ ಆದ್ಯತೆಯಾಗಿದೆ ಎಂದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಬಿ.ಹರಿಕೃಷ್ಣ ಪ್ರಾಸ್ತಾವಿಕ ಮಾತನಾಡಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ವಿಭಾಗ ಪ್ರಭಾರಿ ಗಿರೀಶ್‌ಪಟೇಲ್, ಸಹ ಸಂಘಟನಾ ಕಾರ್ಯದರ್ಶಿ ಎ.ಎನ್.ನಟರಾಜ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಯುವ ಮೋರ್ಚಾ ಅಧ್ಯಕ್ಷ ಹೃಷಿಕೇಶ್ ಪೈ, ಆರ್.ವಿ.ದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net