ಮೋದಿ @70: ಪ್ರಧಾನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

Narendra Modi Lead
Published on

ದಕ್ಷ ಆಡಳಿತಗಾರ, ಸಮರ್ಥ ನಾಯಕ, ಸ್ಪಂದನಶೀಲ ಪ್ರಧಾನಿಯಾಗಿ ಗಮನ ಸೆಳೆದಿರುವ ನರೇಂದ್ರ ಮೋದಿ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಸಾಮಾಜಿಕ ಮಾಧ್ಯಮಗಳಲ್ಲಿ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ಅವರು ಸ್ಟೈಲ್ ಐಕಾನ್ ಕೂಡ ಹೌದು. ದಣಿವರಿಯದೆ ದಿನಕ್ಕೆ 18 ಗಂಟೆ ಕೆಲಸ ಮಾಡುವ ಮೋದಿ ಸದಾ ಕ್ರಿಯಾಶೀಲ. ಇಂದು (ಸೆ.17) ಅವರ 70ನೇ ಜನ್ಮದಿನದ ನಿಮಿತ್ತ ದೇಶಾದ್ಯಂತ ಹಲವು ಕಾರ್ಯಕ್ರಮಗಳು ಏರ್ಪಾಡಾಗಿವೆ. ನಮೋ ಬದುಕಿನ ಹಾದಿ ಮತ್ತು ಅವರ ಸಾಧನೆಗಳ ಅವಲೋಕನವನ್ನು ಗಣ್ಯರ ಲೇಖನದ ಮೂಲಕ ‘ವಿಜಯವಾಣಿ’ ಇಲ್ಲಿ ಕಟ್ಟಿಕೊಟ್ಟಿದೆ.

ಜೀವನಪಥ
  • ದಾಮೋದರದಾಸ್ ಮೂಲಚಂದ್ ಮೋದಿ-ಹೀರಾಬೆನ್ ದಂಪತಿಯ ಆರು ಮಕ್ಕಳ ಪೈಕಿ ಮೂರನೆಯವರಾಗಿ ಜನಿಸಿದ (1950ರ ಸೆ. 17, ಗುಜರಾತಿನ ವಡ್​ನಗರ್) ನರೇಂದ್ರ ಮೋದಿ ಅವರಿಗೆ ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರಿದ್ದಾರೆ. ಮೋದಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.
  • ಬಾಲಕನಾಗಿದ್ದಾಗ ಮೆಹಸಾನ್ ಜಿಲ್ಲೆಯ ವಡ್​ನಗರದ ಬಸ್​ನಿಲ್ದಾಣದಲ್ಲಿ ಸಹೋದರನ ಜತೆ ಸೇರಿ ಟೀ ಅಂಗಡಿ ನಡೆಸುತ್ತಿದ್ದ ವೇಳೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರ ಸಂಪರ್ಕ ಲಭಿಸಿತು.
  • ಪ್ರಚಾರಕರಾದ ನರೇಂದ್ರ ಮೋದಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಲ್ಲೂ ಪದಾಧಿಕಾರಿಯಾಗಿದ್ದರು. ತುರ್ತಪರಿಸ್ಥಿತಿ ಅವಧಿಯಲ್ಲಿ ಅನೇಕ ಪ್ರತಿಭಟನೆಗಳನ್ನು ಆಯೋಜಿಸಿದ ಮೋದಿ 1987ರಲ್ಲಿ ಸಂಘದ ನಿರ್ದೇಶನದಂತೆ ಬಿಜೆಪಿಗೆ ಸೇರ್ಪಡೆಗೊಂಡರು.
ರಾಜಕೀಯ ಬದುಕು
  • ಮುರಳಿ ಮನೋಹರ ಜೋಷಿ ಅವರ ಏಕತಾ ಯಾತ್ರೆಯನ್ನು ಸಂಘಟಿಸಿದ ಬಳಿಕ ನರೇಂದ್ರ ಮೋದಿ ಬಿಜೆಪಿಯಲ್ಲಿ ಪ್ರವರ್ಧಮಾನಕ್ಕೆ ಬಂದರು. ಅಲ್ಲದೆ, 1995ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಗುವಲ್ಲಿ ಮೋದಿ ತಂತ್ರಗಾರಿಕೆಯ ಪರಿಣಾಮವೂ ಇತ್ತು. ನಂತರ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು.
  • 1998ರಲ್ಲಿ ಗುಜರಾತ್ ಚುನಾವಣೆ ನಡೆದಾಗ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮೋದಿ ಪ್ರಮುಖ ಪಾತ್ರವಹಿಸಿದ್ದರಲ್ಲದೆ, ಅವರ ಚುನಾವಣಾ ತಂತ್ರಗಾರಿಕೆಯಿಂದಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂತು.
  • 2001ರಲ್ಲಿ ಮುಖ್ಯಮಂತ್ರಿಯಾದ ಮೋದಿಗೆ, 2002ರಲ್ಲಿ ಗೋಧ್ರೋತ್ತರ ಹಿಂಸಾಚಾರ ವಿಚಾರದಲ್ಲಿ ಪಕ್ಷದಲ್ಲಿ ಕೊಂಚ ಹಿನ್ನಡೆಯಾದರೂ, ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರು. 2007 ಮತ್ತು 2012ರಲ್ಲಿಯೂ ಜಯ ತಂದರು.
  • 2014ರಲ್ಲಿ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಪಕ್ಷಕ್ಕೆ ಭರ್ಜರಿ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ.
  • ಮೊಮೊದಲ ಅವಧಿಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದರು. ಈ ಅವಧಿಯಲ್ಲೂ ಮೊದಲು ಕೈಗೆತ್ತಿಕೊಂಡಿದ್ದು ಭಾರಿ ಸವಾಲುಗಳನ್ನೇ. ನೋಟು ಅಮಾನ್ಯೀಕರಣದ ನಿರ್ಧಾರದಿಂದ ಕಾಳಧನದ ಮೇಲೆ ಪ್ರಹಾರ ಮಾಡಿದರೆ, ಜಿಎಸ್​ಟಿ ಜಾರಿಗೊಳಿಸಿ ತೆರಿಗೆ ಸುಧಾರಣೆಗೆ ನಾಂದಿ ಹಾಡಿದರು. ಜನಧನ್ ಯೋಜನೆ ಮೂಲಕ ಕೋಟ್ಯಂತರ ಜನರು ಬ್ಯಾಂಕ್ ಖಾತೆಗಳನ್ನು ಹೊಂದುವಂತೆ ಮಾಡಿದರು.
  • ‘ಮೇಕ್ ಇನ್ ಇಂಡಿಯಾ’. ಉತ್ಪಾದನಾ ರಂಗಕ್ಕೆ ಶಕ್ತಿ ತುಂಬಲು ಆ ಮೂಲಕ ದೇಶಿಯ ಕೈಗಾರಿಕಾ ಕ್ಷೇತ್ರದ ಉತ್ಪಾದಕತೆ ಹೆಚ್ಚಿಸಲು 2014 ಸೆಪ್ಟೆಂಬರ್ 25ರಂದು ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಮೋದಿ ಉದ್ಘಾಟಿಸಿದರು.
  • ಭಾರತದಲ್ಲಿನ ಅನೈರ್ಮಲ್ಯದ ಸ್ಥಿತಿ ಬಗ್ಗೆ ಎಲ್ಲರೂ ದೂರುತ್ತಿದ್ದರೆ ಹೊರತು ಪರಿಹಾರ ನಿಟ್ಟಿನಲ್ಲಿ ಚಿಂತನೆ ಮಾಡಿದವರು ಕಡಿಮೆ. ಆದರೆ, ‘ಸ್ವಚ್ಛ ಭಾರತ’ವನ್ನು ಜನಾಂದೋಲನವಾಗಿ ಪರಿವರ್ತಿಸಿ, ಸ್ವಚ್ಛತೆ ನಿಟ್ಟಿನಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು.
  • ಪದ್ಮಶ್ರೀ, ಪದ್ಮಭೂಷಣದಂಥ ಪ್ರತಿಷ್ಠಿತ ಗೌರವಗಳಿಗೆ ತೆರೆಮರೆಯ ಹಿರೋಗಳನ್ನು ಆಯ್ಕೆ ಮಾಡುವ ಹೊಸ ಸಂಪ್ರದಾಯ ಆರಂಭಿಸಿದರು. ಈ ಮೂಲಕ ಶ್ರೀಸಾಮಾನ್ಯರ ನಡುವೆ ಇದ್ದು ಕೆಲಸ ಮಾಡಿದ ಸಾಧಕರನ್ನು ಗುರುತಿಸಿದರು.
  • 2019ರ ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ವಿರುದ್ಧ ಸಮರಕ್ಕೆ ಕರೆ ನೀಡಿದ್ದು, ಪರಿಸರ ರಕ್ಷಣೆ ನಿಟ್ಟಿನಲ್ಲಿನ ದೃಢ ಹೆಜ್ಜೆ.
ವಿಶಿಷ್ಟ ವ್ಯಕ್ತಿತ್ವ
  1. ಆಂತರ್ಯದ ಪಯಣಕ್ಕೂ ಅಷ್ಟೇ ಮಹತ್ವ ನೀಡುವ ಅವರು 2019ರ ಲೋಕಸಭಾ ಚುನಾವಣೆ ಮುಗಿದ ಮೇಲೆ ಕೇದಾರನಾಥ ಗುಹೆಯಲ್ಲಿ ಇಡೀ ರಾತ್ರಿ ಧ್ಯಾನದಲ್ಲಿ ನಿರತರಾಗಿದ್ದರು. ನವರಾತ್ರಿ ಹೊತ್ತಲ್ಲಿ ಪ್ರತಿ ವರ್ಷ ಉಪವಾಸ ಆಚರಿಸುವ ಮೋದಿ, ಅಧ್ಯಾತ್ಮ ಆಸಕ್ತರೂ ಹೌದು.
  2. ಮೆಟ್ರೋ ರೈಲಿನಲ್ಲಿ ಪಯಣಿಸುವ ಜನಸ್ನೇಹಿ ಪಿಎಂ.
  3. ಪೌರಕಾರ್ವಿುಕರ ಪಾದಪೂಜೆ ಮಾಡುವ ಮೂಲಕ ‘ಸೇವೆಯಲ್ಲಿ ದೇವರನ್ನು ಕಾಣು’ ಎಂಬ ಸಂದೇಶ ರವಾನೆ.
  4. ಮಕ್ಕಳೊಂದಿಗೆ ಬೆರೆತು, ಅವರ ಮಾತುಗಳನ್ನೂ ಆಲಿಸುವ ಪ್ರಧಾನಿ.
ಹಲವು ದಾಖಲೆಗಳು
  • ಮುಖ್ಯಮಂತ್ರಿಯಾಗಿಯೇ ಮೊದಲ ಬಾರಿ ಗುಜರಾತ್ ವಿಧಾನಸಭೆ ಪ್ರವೇಶಿಸಿದ ಹೆಗ್ಗಳಿಕೆ. ಬಳಿಕ ಉಪ ಚುನಾವಣೆಯೊಂದರಲ್ಲಿ ಶಾಸಕರಾಗಿ ಆಯ್ಕೆಯಾದರು.
  • ಗುಜರಾತ್​ನಲ್ಲಿ ದೀರ್ಘಾವಧಿ (13 ವರ್ಷ) ಆಡಳಿತ ನಡೆಸಿದ ಹೆಗ್ಗಳಿಕೆ.
  • ಪ್ರಧಾನಿಯಾಗಿಯೇ ಮೊದಲ ಬಾರಿ ಸಂಸತ್ ಪ್ರವೇಶಿಸಿದರು.
  • ರಾಜ್ಯವೊಂದರ ಮುಖ್ಯಮಂತ್ರಿ ಪ್ರಧಾನಿಯಾದದ್ದು.
  • ಸ್ಪಷ್ಟ ಬಹುಮತದಿಂದ ಪ್ರಧಾನಿಯಾದ ಮೊಟ್ಟಮೊದಲ ಕಾಂಗ್ರೆಸೇತರ ನಾಯಕ.
  • ಐದು ವರ್ಷಗಳ ಆಡಳಿತಾವಧಿ ಪೂರ್ಣಗೊಳಿಸಿ ಎರಡನೇ ಅವಧಿಗೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸೇತರ ನಾಯಕ.
ಮೋದಿ ಸರ್ಕಾರದ ಮೈಲಿಗಲ್ಲುಗಳು

ರೈತರಿಗೆ ನೆರವು: ಬೇವು ಲೇಪಿತ ಯೂರಿಯಾ, ಮಣ್ಣಿನ ಆರೋಗ್ಯ ಕಾರ್ಡ್, ಫಸಲ್ ಬೀಮಾ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಮಧ್ಯಮ ಮತ್ತು ಸಣ್ಣ ರೈತರಿಗೆ ವಾರ್ಷಿಕ ಸಮಾನ ಮೂರು ಕಂತುಗಳಲ್ಲಿ 6 ಸಾವಿರ  ರೂ. ಸಹಾಯಧನ ಪಾವತಿ.

ಭ್ರಷ್ಟಾಚಾರ ಈಗಲೂ ವ್ಯವಸ್ಥೆಯನ್ನು ಕಾಡುತ್ತಿದೆ. ಈ ಹಳೆಯ ಕಾಯಿಲೆ ವಾಸಿ ಆಗಲು ದೀರ್ಘಾವಧಿ ಸಮಯ ತೆಗೆದುಕೊಳ್ಳುತ್ತಿದೆ. ಸಾಮಾಜಿಕ ಜೀವನದಲ್ಲಿ ಬದಲಾವಣೆ ಆಗಲೇ ಬೇಕು, ಪಾರದರ್ಶಕ ವ್ಯವಸ್ಥೆ ರೂಪಗೊಳ್ಳಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಭ್ರಷ್ಟ ಅಧಿಕಾರಿಗಳನ್ನು ಮನೆಗೆ ಕಳಿಸಿದ್ದೇವೆ. ಎಲ್ಲ ರಂಗಗಳಲ್ಲಿ ಇಂಥ ಶುದ್ಧೀಕರಣ ಆಗಬೇಕಿದೆ. | ನರೇಂದ್ರ ಮೋದಿ ಪ್ರಧಾನ ಮಂತ್ರಿ

ಆಯುಷ್ಮಾನ್ ಭಾರತ್

2018ರ ಸೆ. 23ರಂದು ಚಾಲನೆಗೊಂಡ ಆರೋಗ್ಯ ಯೋಜನೆ. 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಮಾರಣಾಂತಿಕವಾದ ಕ್ಯಾನ್ಸರ್, ಹೃದಯಾಘಾತ ಸೇರಿ ಹಲವು ರೋಗಗಳಿಗೆ ಉಚಿತ ಚಿಕಿತ್ಸೆ ಒದಗಿಸಲು 5 ಲಕ್ಷದವರೆಗೆ ಕೇಂದ್ರ ಸರ್ಕಾರದ ನೆರವು ದೊರೆಯಲಿದೆ.

ನೋಟು ಅಮಾನ್ಯೀಕರಣ

ಅಧಿಕ ಮುಖಬೆಲೆಯ ಹಳೆಯ (-ಠಿ; 1000, -ಠಿ; 500) ನೋಟುಗಳ ಅಮಾನ್ಯೀಕರಣವನ್ನು 2016ರ ನವೆಂಬರ್ 8ರಂದು ಮೋದಿ ಘೋಷಿಸಿದರು. ಆರಂಭದಲ್ಲಿ ಶ್ರೀಸಾಮಾನ್ಯರಿಗೆ ಕೊಂಚ ಅಡಚಣೆಯಾದರೂ, ನಕಲಿ ನೋಟು ಹಾವಳಿ, ಉಗ್ರರಿಗೆ ಆರ್ಥಿಕ ನೆರವು ಮುಖ್ಯವಾಗಿ ಭ್ರಷ್ಟಾಚಾರ, ಕಾಳಧನಕ್ಕೆ ಕಡಿವಾಣ ತರಲು ಇದು ಸಹಕಾರಿ ಆಯಿತು.

ಆರ್ಥಿಕ ಅಪರಾಧಿ ಕಾಯ್ದೆ

ದೇಶದ ಬ್ಯಾಂಕ್​ಗಳಿಗೆ ದೊಡ್ಡ ಪ್ರಮಾಣದಲ್ಲಿ ವಂಚಿಸಿ ವಿದೇಶಕ್ಕೆ ಪರಾರಿಯಾಗುವವರನ್ನು ಅಪರಾಧಿ ಎಂದು ಘೋಷಿಸುವ ಕಾಯ್ದೆಯನ್ನು 2018ರ ಏಪ್ರಿಲ್​ನಲ್ಲಿ ರೂಪಿಸಲಾಯಿತು. ಇದರಿಂದ ಆರ್ಥಿಕ ವಂಚಕರ ಆಸ್ತಿ ಜಪ್ತಿ, ವಿಲೇವಾರಿ ಮಾಡಿ ಸಾಲ ಚುಕ್ತಾ ಮಾಡಿಕೊಳ್ಳುವ ಕಾನೂನು ಜಾರಿಗೆ ಬಂತು.

ಸ್ಪಷ್ಟ ವಿದೇಶಾಂಗ ನೀತಿ

ನರೇಂದ್ರ ಮೋದಿ ಪ್ರಧಾನಿಯಾದ ತರುವಾಯ ಭಾರತ ಜಾಗತಿಕವಾಗಿ ಹೆಚ್ಚು ಮನ್ನಣೆಗೆ ಪಾತ್ರವಾಗಿದೆ. ಸ್ಪಷ್ಟ ವಿದೇಶಾಂಗ ನೀತಿ, ಎಲ್ಲ ರಾಷ್ಟ್ರಗಳ ಜತೆ ಸಹಾಯಹಸ್ತ, ತಂಟೆ- ತಕರಾರು ಮಾಡುವ ದೇಶಗಳಿಗೆ ತಕ್ಕಪಾಠ ಮೋದಿ ವಿದೇಶಾಂಗ ನೀತಿಯ ವಿಶೇಷ. ಭಾರತವನ್ನು ಅಮೆರಿಕ ರಕ್ಷಣಾ ವಿಷಯದಲ್ಲಿ ಪರಮಾಪ್ತ ರಾಷ್ಟ್ರವೆಂದು ಹೇಳಿದೆ. ಮಾಲ್ದೀವ್ಸ್, ಶ್ರೀಲಂಕಾ ಜತೆಗೆ ಆರ್ಥಿಕ, ಭೌಗೋಳಿಕ ಸಂಬಂಧ ಗಟ್ಟಿ, ಪೂರ್ವ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಗೆಳೆಯರನ್ನು ಸಂಪಾದಿಸಿದೆ.

70 ಕಿಲೋ ಲಾಡು ವಿತರಣೆ

ಪ್ರಧಾನಿ ನರೇಂದ್ರ ಮೋದಿ 70ನೇ ಜನ್ಮದಿನ ಪ್ರಯುಕ್ತ ತಮಿಳುನಾಡಿನ ಕೊಯಮತ್ತೂರಿನ ಬಿಜೆಪಿ ಕಾರ್ಯಕರ್ತರು 70 ಕೆ.ಜಿ ತೂಕದ ಲಾಡುವನ್ನು ಬುಧವಾರವೇ ವಿತರಿಸಿದ್ದಾರೆ. ಶಿವನ್ ಕಮಾಚಿ ಅಮ್ಮನ್ ದೇವಸ್ಥಾನದಲ್ಲಿ ನೈವೇದ್ಯ ಮಾಡಿದ ನಂತರ ಹಂಚಿದ್ದಾರೆ. ಅಲ್ಲದೆ, ನಗರದ ಹಲವು ಕಡೆಗಳಲ್ಲಿ ದಿನಸಿ ವಿತರಣೆ ಸೇರಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಗುರುವಾರ ಹಮ್ಮಿಕೊಂಡಿದ್ದಾರೆ. ಅಲ್ಲದೆ, ದೇಶದಾದ್ಯಂತ ಬಿಜೆಪಿ ಕಾರ್ಯಕರ್ತರು ಸೆ.14ರಿಂದ ‘ಸೇವಾ ಸಪ್ತಾಹ’ ಆರಂಭಿಸಿದ್ದು. 20ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net