ಪ್ರತಿಪಕ್ಷಗಳ ಲೆಕ್ಕಾಚಾರ ತಲೆಕೆಳಗು ಮಾಡಿದ ಪ್ರಧಾನಿ ಮೋದಿ: ರಿತುರಾಜ್‌ಸಿನ್ಹ

BJP workshop
Published on

ಬೆಂಗಳೂರು: ಬಿಜೆಪಿ ವಿಚಾರಧಾರೆಗೆ ಅನುಗುಣವಾದ ನೀತಿಗಳ ಜಾರಿ ಸಾರಿದ ಪ್ರಧಾನಿ ನರೇಂದ್ರ ಮೋದಿ, ವಿರೋಧಿಗಳ ತರ್ಕ, ಲೆಕ್ಕಾಚಾರ ಹುಸಿಗೊಳಿಸಿದರು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಿತುರಾಜ್ ಸಿನ್ಹ ವ್ಯಾಖ್ಯಾನಿಸಿದರು.

ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪಕ್ಷದ ಸದಸ್ಯತ್ವ ಅಭಿಯಾನ ರಾಜ್ಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಸತ್ತಿನ ಮೊದಲ ಅಧಿವೇಶನದಲ್ಲಿ ವಖ್ಾ ಕಾಯ್ದೆಗೆ ತಿದ್ದುಪಡಿ ಮಸೂದೆ ಮಂಡನೆ, ಸ್ವಾತಂತ್ರ್ಯ ದಿನದಂದು ದೆಹಲಿಯ ಕೆಂಪು ಕೋಟೆ ಮೇಲೆ ಭಾಷಣದಲ್ಲಿ ಏಕರೂಪ ನಾಗರಿಕ ಸಂಹಿತೆ ಹಾಗೂ ಒಂದು ದೇಶ ಒಂದು ಚುನಾವಣೆಗೆ ಬದ್ಧತೆಯನ್ನು ೋಷಿಸಿದರು.

ಬಿಜೆಪಿ ಎನ್‌ಡಿಎ ಕೇಂದ್ರದಲ್ಲಿ ಮೂರನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೆ ಬಿಜೆಪಿ ಸಂಖ್ಯಾಬಲ ಕುಸಿದಿದೆ. ಮಿತ್ರಪಕ್ಷಗಳ ಮೇಲೆ ಮೋದಿ ಅವಲಂಬಿತರಾಗಿದ್ದು, ಅಧಿಕಾರಕ್ಕಾಗಿ ತಮ್ಮ ವಿಚಾರಧಾರೆಯೊಂದಿಗೆ ರಾಜಿ ಮಾಡಿಕೊಳ್ಳಲಿದ್ದಾರೆ ಎಂಬ ಪ್ರತಿಪಕ್ಷಗಳ ಲೆಕ್ಕಾಚಾರವನ್ನು ಮೋದಿ ತಲೆ ಕೆಳಗು ಮಾಡಿದ್ದಾರೆ ಎಂದರು.

ಏಳು ಅಂಶಗಳ ಕಾರ್ಯತಂತ್ರ

ಸಾಂಸ್ಕೃತಿಕ ರಾಷ್ಟ್ರೀಯ ವಾದ, ವೈಚಾರಿಕತೆ, ಸರ್ವಸ್ಪರ್ಶಿ, ಸರ್ವರನ್ನು ಒಳಗೊಂಡು, ಆಂತರಿಕ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಿರುವ ಬಿಜೆಪಿ ನೈಜ ರಾಷ್ಟ್ರೀಯ ಪಕ್ಷವಾಗಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ, ಗಾಂಧಿ ಕುಟುಂಬದ ಕುಡಿಗಳಿಗೆ ಮಣೆ ಹಾಕುತ್ತದೆ ಎಂದು ಟೀಕಿಸಿದರು.

ಸೆ.2ರಿಂದ 15ರವರೆಗೆ ಪ್ರಾಥಮಿಕ ಮತ್ತು ಅಕ್ಟೋಬರ್ 16 ರಿಂದ 31ರವರೆಗೆ ಸಕ್ರಿಯ ಸದಸ್ಯತ್ವ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದ್ದು, ನ.10ಕ್ಕೆ ಮುಕ್ತಾಯವಾಗಲಿದೆ. ಒಟ್ಟು ಏಳು ಅಂಶಗಳು ಕಾರ್ಯತಂತ್ರವನ್ನು ಅಭಿಯಾನದ ಯಶಸ್ಸಿಗೆ ರೂಪಿಸಲಾಗಿದೆ ಎಂದರು.

ಟಾಸ್ಕ್, ಟೈಮ್‌ಲೈನ್, ಟೀಮ್-ಟ್ರೈನಿಂಗ್, ಟ್ರ್ಯಾಕಿಂಗ್, ಟ್ರಾವೆಲಿಂಗ್ ಮತ್ತು ಟಚ್ ಥಿಯರಿ (ಏಳು ಟಿ) ಕಾರ್ಯತಂತ್ರ ಪೂರ್ಣ ಪಾಲನೆಯ ಮೇಲೆ ಅಭಿಯಾನದ ಯಶಸ್ಸು ಆಧರಿಸಿದೆ. ಈ ಬಾರಿಯೂ ಸದಸ್ಯರ ನೋಂದಣಿ ಸಂಖ್ಯೆಯಲ್ಲಿ ಕರ್ನಾಟಕ ಮುಂದಿರಬೇಕು ಎಂದು ರಿತುರಾಜ್ ಸಿನ್ಹ ಆಶಿಸಿದರು.

ಕಾಂಗ್ರೆಸ್‌ಗೆ ನಡುಕ

ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಸದನದ ಒಳ-ಹೊರಗೆ ಪಕ್ಷದ ತೀವ್ರ ಹೋರಾಟ, ಅಭಿವೃದ್ಧಿ ಕೆಲಸ ಸ್ಥಗಿತದಿಂದ ಕಾಂಗ್ರೆಸ್ ಶಾಸಕರೇ ಬೇಸತ್ತಿದ್ದಾರೆ. ಜನರು ತಿರುಗಿ ಬಿದ್ದಿರುವ ಕಾರಣ ಕಾಂಗ್ರೆಸ್ ನಾಯಕರಿಗೆ ನಡುಕ ಶುರುವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗೇಲಿ ಮಾಡಿದರು.

ಮಹರ್ಷಿ ವಾಲ್ಮೀಕಿ ಹಾಗೂ ಮುಡಾದಲ್ಲಿ ನಿವೇಶನ ವಂಚಿತ ದಲಿತರ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಿದೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಸಿದ್ದರಾಮಯ್ಯ ಬಹಳ ದಿನ ಉಳಿಯರು. ಸರ್ಕಾರದ ಭವಿಷ್ಯದ ಬಗ್ಗೆ ಕಾಂಗ್ರೆಸ್ ಶಾಸಕರಲ್ಲಿ ಸಂದೇಹ ಶುರುವಾಗಿದೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧ ನಿಗಮದ ಅವ್ಯವಹಾರ, ಮುಡಾ ನಿವೇಶನಗಳ ಹಂಚಿಕೆ ಅಕ್ರಮ ವಿಷಯಗಳು ಈಗ ಪ್ರತಿಪಕ್ಷ ಬಿಜೆಪಿಯದಲ್ಲ, ಜನರ ಸ್ವತ್ತಾಗಿದೆ. ಇದು ಮಿಸ್ಟರ್ ಕ್ಲೀನ್ ಸಿದ್ದರಾಮಯ್ಯ ಕಂಗೆಟ್ಟಿದ್ದಾರೆ.

ಸರ್ಕಾರವನ್ನು ಅಸ್ಥಿರಗೊಳಿಸಲು ನಾವು ಯಾರೂ ಪ್ರಯತ್ನಿಸುತ್ತಿಲ್ಲ. ಕಾಂಗ್ರೆಸ್‌ನ ಯಾವೊಬ್ಬ ಶಾಸಕರನ್ನು ರೆಸಾರ್ಟ್‌ನಲ್ಲಿ ಕೂಡಿ ಹಾಕಿಲ್ಲ. ಗ್ಯಾರಂಟಿಗಳ ವೈಫಲ್ಯ, ಅಭಿವೃದ್ಧಿ ಸ್ಥಗಿತ, ಭ್ರಷ್ಟಾಚಾರ ಪ್ರಕರಣಗಳಿಂದ ಆ ಪಕ್ಷದ ಶಾಸಕರು ರೋಸಿ ಹೋಗಿದ್ದಾರೆ ಎಂದು ಆರ್.ಅಶೋಕ್ ಟೀಕಿಸಿದರು.

ಗುರಿ ಮೀರುವ ಸವಾಲು

ಅಭಿಯಾನದ ಲಾಂಛನ ಮತ್ತು ಮಿಸ್ಡ ಕಾಲ್ ನಂಬರ್ (8800002024) ಬಿಡುಗಡೆ ಮಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಸದಸ್ಯತ್ವ ನೋಂದಣಿಯಲ್ಲಿ ಈ ಬಾರಿ ಗುರಿ ಮೀರಿದ ಸಾಧನೆಯನ್ನು ಸವಾಲಾಗಿ ಸ್ವೀಕರಿಸಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ.ಸುನಿಲ್‌ಕುಮಾರ್, ಪಿ.ರಾಜೀವ್, ಪ್ರೀತಂಗೌಡ, ನಂದೀಶ್‌ರೆಡ್ಡಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ದೊಡ್ಡನಗೌಡ ಪಾಟೀಲ್, ಪ್ರತಾಪಸಿಂಹ ನಾಯಕ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net