ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ: ನಾಳೆಯಿಂದ ಅಮುಲ್ ಹಾಲಿನ ದರ ಲೀಟರ್‌ಗೆ ರೂ. 4 ರವರೆಗೆ ಜಿಗಿತ! | Milk Price Hike

Milk Price Hike
ಮದರ್ ಡೈರಿ ಬೆನ್ನಲ್ಲೇ ಅಮುಲ್ ದರ ಏರಿಕೆ
Published on: 
  • ನವೆಂಬರ್ 12 ರಿಂದ ಅಮುಲ್ ಹಾಲಿನ ದರ ಲೀಟರ್‌ಗೆ ರೂ.2 ರಿಂದ ರೂ.4 ರಷ್ಟು ಹೆಚ್ಚಳ

  • 'ಅಮುಲ್ ತಾಜಾ' ರೂ. 62 ಹಾಗೂ 'ಅಮುಲ್ ಗೋಲ್ಡ್' ರೂ. 80 ತಲುಪಲಿದೆ

  • ಶೇ.80 ಭಾಗ ಆದಾಯವನ್ನು 36 ಲಕ್ಷ ಹಾಲು ಉತ್ಪಾದಕ ರೈತರಿಗೆ ನೀಡಲಿದೆ ಅಮುಲ್

Amul Milk: ನಿತ್ಯಬಳಕೆಯ ಹಾಲಿನ ದರ ಮತ್ತೆ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. 'ಅಮುಲ್' ಬ್ರ್ಯಾಂಡ್‌ನಡಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ 'ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ' (GCMMF) ತನ್ನ ತಾಜಾ ಹಾಲಿನ ದರವನ್ನು ಲೀಟರ್‌ಗೆ ರೂ. 2 ರಿಂದ ರೂ. 4 ರವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಈ ನೂತನ ದರಗಳು ನವೆಂಬರ್ 12 ರಿಂದ ದೇಶಾದ್ಯಂತ ಜಾರಿಗೆ ಬರಲಿವೆ.

ದೇಶಾದ್ಯಂತ ಪೌಚ್ ರೂಪದಲ್ಲಿ ಲಭ್ಯವಿರುವ ಪ್ರಮುಖ ಅಮುಲ್ ಹಾಲಿನ ಮಾದರಿಗಳ ಮೇಲಿನ ಬೆಲೆಯನ್ನು ಶೇಕಡಾ 4 ರಿಂದ 5 ರಷ್ಟು ಏರಿಕೆ ಮಾಡಲಾಗಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣಗಳು

ಉತ್ಪಾದನಾ ವೆಚ್ಚ ಹೆಚ್ಚಳ: ಕಳೆದ ಒಂದು ವರ್ಷದಲ್ಲಿ ಹಸಿರು ಮತ್ತು ಒಣ ಮೇವು, ಜಾನುವಾರುಗಳ ಆಹಾರ (ಹಿಂಡಿ, ಜೋಳ, ಮಳೆನೀರು), ಪ್ಯಾಕೇಜಿಂಗ್ ಫಿಲ್ಮ್ ಹಾಗೂ ಇಂಧನ ಸಾಗಾಣಿಕೆ ವೆಚ್ಚದಲ್ಲಿ ಭಾರಿ ಏರಿಕೆಯಾಗಿದೆ.

ಮಳೆ ಅಭಾವ: ಗುಜರಾತ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕಡಿಮೆ ಹಾಗೂ ಅಸಮತೋಲಿತ ಮಳೆಯಾಗಿರುವುದರಿಂದ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ಕಷ್ಟಕರ ಪರಿಸ್ಥಿತಿಯಲ್ಲಿ ರೈತರಿಗೆ ಬೆಂಬಲ ನೀಡಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ಅಮುಲ್ ತಿಳಿಸಿದೆ.

ರೈತರಿಗೆ ನೆರವು: ಗ್ರಾಹಕರಿಂದ ಸಂಗ್ರಹಿಸುವ ಒಟ್ಟು ಆದಾಯದ ಶೇ. 80 ರಷ್ಟು ಭಾಗವನ್ನು ಅಮುಲ್ ತನ್ನ 36 ಲಕ್ಷ ಹಾಲು ಉತ್ಪಾದಕ ರೈತರಿಗೆ ನೀಡುತ್ತದೆ. ಹೀಗಾಗಿ ಈ ದರ ಏರಿಕೆಯ ಸಿಂಹಪಾಲು ನೇರವಾಗಿ ರೈತರಿಗೆ ಸಿಗಲಿದೆ.

ಅಮುಲ್ ಹಾಲಿನ ನೂತನ ದರಗಳು ಎಷ್ಟು?

ಅಮುಲ್ ತಾಜಾ: ಲೀಟರ್‌ಗೆ ರೂ. 2 ಏರಿಕೆಯಾಗಿದ್ದು, ಹೊಸ ಬೆಲೆ ರೂ. 62 ಆಗಲಿದೆ.

ಅಮುಲ್ ಗೋಲ್ಡ್: ಲೀಟರ್‌ಗೆ ರೂ. 4 ಹೆಚ್ಚಳವಾಗಿದ್ದು, ನೂತನ ದರ ರೂ. 80 ತಲುಪಲಿದೆ.

ಇದಲ್ಲದೆ 'ಅಮುಲ್ ಶಕ್ತಿ' ಮತ್ತು 'ಅಮುಲ್ ಟೀ ಸ್ಪೆಷಲ್' ಹಾಲಿನ ದರಗಳೂ ಏರಿಕೆಯಾಗಲಿವೆ.

ಇದನ್ನೂ ಓದಿ: ದೇಶದ ಆರ್ಥಿಕತೆ ಮುನ್ನುಗ್ಗುತ್ತೆ ಎಂದ ಮೂಡೀಸ್: ಜಿಡಿಪಿ ವರದಿ ಬಗ್ಗೆ ನೆಟ್ಟಿಗರು ಹೇಳಿದ್ದು ಹೀಗೆ! | GDP Growth

ದೆಹಲಿಯಲ್ಲಿ ಮದರ್ ಡೈರಿ (Mother Dairy) ತನ್ನ ಹಾಲಿನ ಬೆಲೆ ಏರಿಸಿದ ಕೆಲವೇ ಗಂಟೆಗಳಲ್ಲಿ ಅಮುಲ್ ಕೂಡ ದರ ಹೆಚ್ಚಳ ಮಾಡಿದೆ. ಮೇ 2026 ರ ನಂತರ ಅಮುಲ್ ಹಾಲಿನ ದರ ಏರಿಕೆಯಾಗುತ್ತಿರುವುದು ಇದೇ ಮೊದಲು.